
ಬೆಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಕಾರಣಕ್ಕೆ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿದ್ದು ಈ ಕುರಿತು ಹೈಕೋರ್ಟ್ ಹರೀಶ್ ಪೂಂಜಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠವು ಆರೋಪಿಯನ್ನು ಬಂಧಿಸಿದರೆ ಶಾಸಕರಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ? ಠಾಣೆಗೆ ತೆರಳಿ ಪೊಲೀಸರನ್ನು ಏಕೆ ಪ್ರಶ್ನಿಸಬೇಕು? ಭಯೋತ್ಪಾದಕರನ್ನು ಬಂಧಿಸಿ ಠಾಣೆಗೆ ಕರೆತಂದಾಗ, ಬಂಧಿತ ಅಮಾಯಕನಾಗಿದ್ದಾನೆ ಎಂದು ಆತನ ಪತ್ನಿ ಹೇಳಿದರೆ ಆಗ ಶಾಸಕರು ಏನು ಮಾಡುತ್ತಾರೆ? ಆಗಲೂ ಪೊಲೀಸರನ್ನು ಪ್ರಶ್ನೆ ಮಾಡುತ್ತಾರೆಯೇ? ಶಾಸಕರು ಹೀಗೆ ನಡೆದುಕೊಂಡರೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಹೇಗೆ ಸಾಧ್ಯವಾಗುತ್ತದೆ? ಪೊಲೀಸರು ತಮ್ಮ ಕೆಲಸ ಮಾಡಬಾರದೇ? ಎಂದು ಕಟುವಾಗಿ ಪ್ರಶ್ನಿಸಿತು.
ಶಾಸಕರು ಇರುವುದು ಶಾಸನವನ್ನು ರೂಪಿಸಲು. ಶಾಸನ ರಚನೆ ಮಾಡುವುದರಲ್ಲಿ ತಮ್ಮ ಕೊಡುಗೆ ನೀಡಬೇಕು. ಅದು ಬಿಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ. ಮುಂದೊಂದು ದಿನ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ನೋಡಲು ಬಯಸಿ ಶಾಸಕರು ಕೋರ್ಟ್‌ಗೆ ಬಂದು ಕುಳಿತರೆ ನಾವೇನು ಮಾಡುವುದು? ಈ ರೀತಿಯ ವರ್ತನೆ ಸಹಿಸಲಾಗದು. ಇಂತಹ ಬೆಳವಣಿಗೆಗೆ ಅಂತ್ಯಹಾಡಬೇಕಿದೆ ಎಂದರು.
ಅಂತಿಮವಾಗಿ ಅರ್ಜಿ ಸಂಬಂಧ ಬೆಳ್ತಂಗಡಿ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ ನ್ಯಾಯಪೀಠ, ಮುಂದಿನ ವಿಚಾರಣೆಯವರೆಗೆ ಪೊಲೀಸರು ಶಾಸಕರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಸಮಾಧಾನದಿಂದ ಇರಬೇಕು ಎಂದು ಪೊಲೀಸರಿಗೆ ಮೌಖಿಕವಾಗಿ ಸೂಚಿಸಿತು.