ಪರಿತ್ರಾಣಾಯ ಸಾಧೂನಾಮ್
ವಿನಾಶಾಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ

ಜಗತ್ತಿನಲ್ಲಿ ಅಧರ್ಮ ತಾಂಡವವಾಡಿದಾಗ ದುಷ್ಟರನ್ನು ಶಿಕ್ಷಿಸಲು,ಶಿಷ್ಟರನ್ನು ರಕ್ಷಿಸಲು ಭಗವಂತ ನಾನಾ ಅವತಾರಗಳನ್ನು ತಾಳುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.ವಿಷ್ಣುವಿನ 10 ಅವತಾರಗಳಲ್ಲಿ 9 ನೇ ಅವತಾರವಾದ ಕೃಷ್ಣಾವತಾರವು ಅತ್ಯಂತ ಮಹತ್ವ ಪೂರ್ಣವಾದುದು.ನರಕಾಸುರನ ಸಂಹಾರ, ಜರಾಸಂಧನ ಸಂಹಾರ,ಕಂಸಾಸುರನ ಸಂಹಾರ ಇತ್ಯಾದಿ ಧರ್ಮ ಸಂಸ್ಥಾಪನೆಯ ಹಲವು ರೂಪಗಳು.ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಜಗದೋದ್ಧಾರಕನು ಅವತಾರ ತಾಳಿದ ದಿನ.ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಕಾರಾಗೃಹದಲ್ಲಿ ಜನಿಸಿದನು ಎಂದು ನಂಬಲಾಗಿದೆ.ಹೀಗಾಗಿ ಭಕ್ತರೆಲ್ಲರೂ ತಡರಾತ್ರಿಯಲ್ಲಿ ಬಾಲಕೃಷ್ಣನ ವಿಗ್ರಹಕ್ಕೆ ಪ್ರಿಯವಾದ ಹೂವು,ತುಳಸಿದಳಗಳಿಂದ ಅರ್ಚಿಸಿ ಸಿಹಿ ಭಕ್ಷ್ಯ ಗಳ ನ್ನು ಅರ್ಪಿಸುವುದು ವಾಡಿಕೆ.ವಿಶ್ವದಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವರು.
ಕೃಷ್ಣನ ಜನನ ಒಂದು ವಿಸ್ಮಯ
ಕಂಸ ಹಾಗೂ ಚಾಣೂರರ ಸಂಹಾರಕ್ಕಾಗಿ ಕೃಷ್ಣ ಅವತಾರವೆತ್ತಿದ ಎನ್ನಲಾಗಿದೆ.ಹಿಂದೆ ಮಥುರಾ ನಗರದಲ್ಲಿ ರಾಜನಾಗಿದ್ದ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿರಿಸಿ ಸಿಂಹಾಸನವೇರುತ್ತಾನೆ. ತನ್ನ ಪ್ರೀತಿ ಪಾತ್ರಳಾದ ತಂಗಿ ದೇವಕಿಯ ವಿವಾಹವನ್ನು ವಸುದೇವನೊಂದಿಗೆ ನೆರವೇರಿಸುತ್ತಾನೆ.ವಿವಾಹದ ಬಳಿಕ ವಧುವರರನ್ನು ರಥದಲ್ಲಿ ಕೊಂಡೊಯ್ಯುವಾಗ ಅಶರೀರ ವಾಣಿಯೊಂದು ಕೇಳಿಸುತ್ತದೆ. ಎಲೈ! ಕಂಸ, “ದೇವಕಿಗೆ ಹುಟ್ಟುವ 8 ನೆ ಶಿಶುವಿನಿಂದ ನಿನ್ನ ಮೃತ್ಯು ಸಂಭವಿಸುತ್ತದೆ.”ಎಂದು ಹೇಳಿ ಭಯವನ್ನು ಹುಟ್ಟಿಸುತ್ತದೆ.ಇದರಿಂದ ಭಯಗೊಂಡ ಕಂಸ ವಸುದೇವನನ್ನು ಕೊಲ್ಲಲು ಮುಂದಾಗುತ್ತಾನೆ.ಆಗ ದೇವಕಿ ತನ್ನ ಅಣ್ಣನಲ್ಲಿ ತನ್ನ ಮಾಂಗಲ್ಯ ಉಳಿಸು ಎಂದು ಅಂಗಲಾಚಿ ಬೇಡುತ್ತಾಳೆ.ತನಗೆ ಜನಿಸಿದ ಎಲ್ಲಾ ಶಿಶುಗಳನ್ನು ಕಂಸನಿಗೆ ಒಪ್ಪಿಸುವೆ ಎಂದು ಪ್ರಾಣ ಭಿಕ್ಷೆಗಾಗಿ ಸೆರಗೊಡ್ಡುತ್ತಾಳೆ. ಇದಕ್ಕೆ ಕಂಸ ಒಪ್ಪಿ ದೇವಕಿ,ವಸುದೇವರನ್ನು ಕಾರಾಗೃಹದಲ್ಲಿ ಬಂಧಿಸುತ್ತಾನೆ.ಪ್ರತಿ ಬಾರಿ ಶಿಶು ಹುಟ್ಟಿದಾಗ ಮಗು ಕಂಸನ ಪಾಲಾಗುತ್ತಿತ್ತು.ಆದರೆ ಎಂಟನೇ ಶಿಶು ಹುಟ್ಟಿದಾಗ ವಸುದೇವ ಕೃಷ್ಣನನ್ನು ಗುಟ್ಟಾಗಿ ಬುಟ್ಟಿಯಲ್ಲಿ ಇಟ್ಟು ನೆರೆಯ ಗೋಕುಲಕ್ಕೆ ತೆರಳಿ ಅಲ್ಲಿ ಯಶೋದೆ ಮತ್ತು ನಂದಗೋಪರ ಹೆಣ್ಣು ಶಿಶುವಿನ ಜಾಗದಲ್ಲಿ ಕೃಷ್ಣನನ್ನು ಮಲಗಿಸಿ,ಯಶೋದೆಯ ಹೆಣ್ಣು ಶಿಶುವನ್ನು ದೇವಕಿಯ ಮಡಿಲಲ್ಲಿ ಮಲಗಿಸುತ್ತಾನೆ.ಸೆರೆಮನೆಯಿಂದ ಗೋಕುಲಕ್ಕೆ ಸಾಗುವ ಎಲ್ಲಾ ದಾರಿಗಳೂ ತೆರೆದು ಪವಾಡದಂತೆ ಎಲ್ಲವೂ ಘಟಿಸಿತು.ದೇವಕಿಗೆ ಹೆಣ್ಣು ಶಿಶುವಿನ ಜನನ ವಾಯಿತು ಎಂಬ ಸುದ್ದಿ ತಿಳಿದ ಕಂಸ ಸೆರೆಮನೆಗೆ ಬಂದು ಹೆಣ್ಣು ಶಿಶುವನ್ನು ಕೊಲ್ಲಲು ಕೈಗೆತ್ತಿದಾಗ ಪವಾಡ ಸದೃಶವಾಗಿ ಶಿಶು ಆಕಾಶಕ್ಕೆ ನೆಗೆದು” ನಿನ್ನ ಸಂಹಾರ ಮಾಡಲು ಈಗಾಗಲೇ ಕೃಷ್ಣ ಜನ್ಮ ತಾಳಿದ್ದಾನೆ”. ಎಂದು ಹೇಳಿ ಅಂತರ್ಧಾನವಾಯಿತು.ಮುಂದೆ ಕೃಷ್ಣ ತನ್ನ ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಸಂಹರಿಸಿದನು.
ಕನಕನಿಗೊಲಿದ ಗೋವಿಂದ
ಭಾಗವತದಲ್ಲಿ ಶ್ರೀ ಕೃಷ್ಣನ ಅನೇಕ ರೋಚಕ
ಕಥೆಗಳಿವೆ.ಪೂತನಿ ಎಂಬ ರಾಕ್ಷಸಿಯ ವಧೆ,ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ,ಕಾಳಿಂಗ ಮರ್ಧನ,ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನಿಂದ ಎತ್ತಿದ ಕಥೆಗಳು ಕೇಳಿಬರುತ್ತದೆ.ಶ್ರೀಕೃಷ್ಣ ಭಕ್ತಿಗೆ ಒಲಿವ ಭಕ್ತ ವತ್ಸಲ.ಭಕ್ತಿಗೆ ಯಾವುದೇ,ಧರ್ಮ, ಜಾತಿ,ಲಿಂಗದ ಭೇದವಿಲ್ಲ,ಎನ್ನುವುದಕ್ಕೆ ಕನಕದಾಸರ ಜೀವನದ ಒಂದು ಘಟನೆಯೇ ಸಾಕ್ಷಿ. ಉಡುಪಿಯ ಕೃಷ್ಣ ದೇಗುಲದಲ್ಲಿ ಕನಕದಾಸರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ನೀಡದಿದ್ದಾಗ ಕನಕದಾಸರ ಭಕ್ತಿಗೆ ಒಲಿದು ಕೃಷ್ಣನೇ ಪಶ್ಚಿಮಾಭಿಮುಖಕ್ಕೆ ತಿರುಗಿ ದರ್ಶನ ನೀಡಿದನೆಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಈಗಲೂ ಉಡುಪಿಯ ಕೃಷ್ಣ ಮಠದಲ್ಲಿ ಕನಕನ ಕಿಂಡಿಯನ್ನು ಕಾಣಬಹುದು.
ಚಿತ್ತ ಕದ್ದ ನವನೀತ ಚೋರ ಶ್ರೀಕೃಷ್ಣ
ಶ್ರೀ ಕೃಷ್ಣ ಎಂದೊಡನೆ ಪುಟ್ಟ ಮಕ್ಕಳಿಂದ ವಯಸ್ಕರೆಲ್ಲರಿಗೂ ಅದೇನೋ ಸೆಳೆತ, ಆಕರ್ಷಣೆ.ಕೃಷ್ಣಾ ಎಂದೊಡನೆ ಮೊದಲು ನೆನಪಾಗುವುದು ಕೃಷ್ಣನ ಕೊಳಲು,ನವಿಲುಗರಿ.ಇವೆರಡೂ ಇಲ್ಲದೇ ಯಾವುದೇ ಪೂಜೆ ಅಪೂರ್ಣ ಎನಿಸುವುದು.ಕೊಳಲು ನವಿಲುಗರಿಯಿಲ್ಲದ ಕೃಷ್ಣನನ್ನು ಊಹಿಸಲೂ ಸಾಧ್ಯವಿಲ್ಲ. ತನ್ನ ಸುಂದರವಾದ ನೀಲ ವರ್ಣದ ಕಾರಣದಿಂದಲೇ ಶ್ಯಾಮ ಎಂದು ಹೆಸರು ವಾಸಿಯಾದ.ಕೊಳಲನ್ನು ಕೈಯಲ್ಲಿ ಪಿಡಿದಿರುವ ಕಾರಣ ಮುರಳೀಧರ ಎನಿಸಿಕೊಂಡ. ಬಾಲಕೃಷ್ಣ,ಮುದ್ದು ಕೃಷ್ಣ ,ರಾಧಾಕೃಷ್ಣ,ಗೋಪಾಲಕೃಷ್ಣ ಹೀಗೆ ಕೃಷ್ಣನ ಬಣ್ಣಿಸಲು ನೂರೆಂಟು ಹೆಸರುಗಳು.ವಾಸುದೇವ,ನಂದ ಗೋಪಾಲ,ಗಿರಿಧರ,ವೇಣುಗೋಪಾಲ, ಚಕ್ರಧಾರಿ,ಜಗನ್ನಾಥ,ಜನಾರ್ಧನ,ಪಾರ್ಥ ಸಾರಥಿ,ಮಧುಸೂದನ,ಮಾಧವ,ಮುಕುಂದ ಹೀಗೆ ಪ್ರತಿ ನಾಮದ ಹಿಂದೆ ಹಲವು ವೈಶಿಷ್ಟ್ಯಪೂರ್ಣ ಕಾರಣಗಳಿವೆ.
ಮುರಳಿಲೋಲ ಶ್ರೀಕೃಷ್ಣ
ಶ್ರೀಕೃಷ್ಣನ ಕೈಯಲ್ಲಿರುವ ಕೊಳಲಿನ ನಾದಕ್ಕೆ ಮನ ಸೋಲದವರಾರೂ ಇಲ್ಲ.ಕೊಳಲಿನ ಮಧುರತೆಗೆ ಎಲ್ಲವನ್ನೂ ಸಮ್ಮೋಹನಗೊಳಿಸುವ ಶಕ್ತಿ ಇತ್ತು ಎಂದು ನಂಬಲಾಗಿದೆ.ಕೃಷ್ಣನ ಕೈಯಲ್ಲಿ ಕೊಳಲು ಹೇಗೆ ಬಂತು ಎನ್ನುವುದಕ್ಕೂ ಹಲವಾರು ದಂತಕಥೆಗಳಿವೆ.
ಎಲ್ಲಾ ಸಸ್ಯವರ್ಗಗಳಿಗಿಂತ ಬಿದಿರು ತಾನು ಯಾವುದಕ್ಕೂ ಉಪಯೋಗಕ್ಕೆ ಬಾರದೆಂದು ಕೊರಗುತ್ತಿತ್ತು.ಬಿದಿರು ತನ್ನನ್ನು ತಾನು ಸಂಪೂರ್ಣ ಕೃಷ್ಣನಿಗೆ ಅರ್ಪಿಸಿಕೊಂಡು ನೋವನ್ನೆಲ್ಲಾ ಸಹಿಸಿಕೊಂಡು ಸುಂದರವಾದ ಕೊಳಲಾಗಿ ಕೃಷ್ಣನ ಪ್ರೀತಿಗೆ ಪಾತ್ರವಾಯಿತು.ಕೃಷ್ಣನ ಕೈಯಲ್ಲಿರುವ ಕೊಳಲು ಪ್ರೀತಿ, ಸಂತೋಷ, ಆಕರ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ.ನಮ್ಮ ಜೀವನವೂ ಕೊಳಲಿನ ನಾದದಂತೆ ಮಧುರವಾಗಿರಬೇಕೆಂದು ಸಂದೇಶ ನೀಡುತ್ತದೆ.ಯಾವುದೇ ಪರಿಸ್ಥಿತಿಯಲ್ಲೂ ಧೃತಿಗೆಡದೆ ಸಂತೋಷವಾಗಿರಬೇಕು ಮತ್ತು ಸಂತೋಷವನ್ನು ಹಂಚಬೇಕೆನ್ನುವ ಉನ್ನತವಾದ ಸಂದೇಶವನ್ನು ಸಾರುತ್ತದೆ.
ನವಿಲುಗರಿ ಕೃಷ್ಣನಿಗೆ ಪ್ರಿಯವೇಕೆ?
ಕೃಷ್ಣ ನವಿಲುಗರಿಯನ್ನು ಏಕೆ ಧರಿಸುವನು ಎಂದು ಪ್ರಶ್ನೆಗಳು ಮೂಡುತ್ತದೆ.ತಲೆಯ ಮೇಲೆ ಧರಿಸಿದ ನವಿಲುಗರಿಗೆ ತನ್ನದೇ ಆದ ಮಹತ್ವವಿದೆ.ಒಮ್ಮೆ ಶ್ರೀಕೃಷ್ಣನು ವೃಂದಾವನದಲ್ಲಿ ಮನಮೋಹಕವಾಗಿ ಕೊಳಲನ್ನು ಊದುತ್ತಿರುವಾಗ ಕೊಳಲಿನ ನಾದಕ್ಕೆ ಮನಸೋತು ಸುತ್ತಲಿನ ನವಿಲುಗಳೆಲ್ಲಾ ಜಮಾಯಿಸಿದವು.ಕೃಷ್ಣನು ಕೊಳಲು ನುಡಿಸುತ್ತಾ ಹೆಜ್ಜೆ ಹಾಕಲು ಆರಂಭಿಸಿದನು.ಇದನ್ನು ಕಂಡು ಅಲ್ಲಿರುವ ನವಿಲುಗಳು ಕೂಡ ಹೆಜ್ಜೆ ಹಾಕಲಾರಂಭಿಸಿದವು.ಕೊನೆಗೆ ಎಲ್ಲಾ ನವಿಲುಗಳು ಕೃಷ್ಣನಿಗೆ ವಂದಿಸುತ್ತಾ,”ನೀನು ನಮಗೆ ನೃತ್ಯ ಕಲಿಸಿದ ಗುರು.” ಹೀಗಾಗಿ ಗುರುದಕ್ಷಿಣೆಯಾಗಿ ಈ ನವಿಲು ಗರಿಯನ್ನು ಸ್ವೀಕರಿಸಬೇಕೆಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದವು.ಅಂದಿನಿಂದ ಕೃಷ್ಣನು ನವಿಲುಗರಿಯನ್ನು ಸದಾ ಶಿರದಲ್ಲಿ ಧರಿಸಿದನು ಎಂದು ನಂಬಲಾಗಿದೆ. ನವಿಲು ಗರಿಯು ಕೃಷ್ಣನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿತು.ಧಾರ್ಮಿಕ ಗ್ರಂಥದ ಪ್ರಕಾರವೂ ನವಿಲುಗರಿ ಮಹತ್ವದ್ದಾಗಿದೆ.ಇದು ಜೀವನದ ಅನೇಕ ತೊಂದರೆಗಳನ್ನು ಕಡಿಮೆ ಮಾಡಿ ಶಾಂತಿ,ಸಮೃದ್ಧಿ,ಸಂತೋಷವನ್ನು ಉಂಟುಮಾಡುವುದು ಎಂದು ನಂಬಲಾಗಿದೆ.
ಗೋಪಿಕೆಯರ ಮನಸ್ಸು ಕದ್ದ ತುಂಟ ಕೃಷ್ಣ
ಕೃಷ್ಣನ ತುಂಟಾಟಗಳು,ಬಾಲಲೀಲೆಗಳು, ಎಂತಹವರ ಮನಸ್ಸನ್ನು ಕೂಡ ತನ್ನತ್ತ ಸೆಳೆಯದೇ ಇರಲಾರದು. ಕೃಷ್ಣನಿಗೆ ಬೆಣ್ಣೆ ಎಂದರೆ ಪ್ರೀತಿ.ಯಶೋದೆಯ ಕಣ್ತಪ್ಪಿಸಿ,ಗೋಪಿಕೆಯರ ಮನೆಗೆ ನುಗ್ಗಿ ಬೆಣ್ಣೆ ಕದ್ದು ತಿಂದ ಕಾರಣ ಆತನಿಗೆ ಬೆಣ್ಣೆ ಕಳ್ಳ, ಕಳ್ಳ ಕೃಷ್ಣ ಎಂದೆಲ್ಲಾ ಹೆಸರು ಬಂತು.ಮೊಸರು ಕಡೆದು
ಬೆಣ್ಣೆಯನ್ನು ಇಟ್ಟ ಮಡಿಕೆ ಕ್ಷಣಮಾತ್ರದಲ್ಲಿ
ಬರಿದಾಗುತಿತ್ತು.ಗೋಪಿಕೆಯರ ದೂರು ಕೇಳಿ ಯಶೋದೆಯು ಕೃಷ್ಣನನ್ನು ಕಟ್ಟಿಹಾಕಿದರೂ ಹಗ್ಗವನ್ನು ಬಿಡಿಸಿಕೊಂಡು ಮತ್ತೆ ಕೃಷ್ಣ ಬೆಣ್ಣೆ ಕದಿಯುತ್ತಿದ್ದ.ನಮ್ಮ ಬದುಕು ಕೂಡ ಮೊಸರನ್ನು ಕಡೆದು ಪಡೆದ ಬೆಣ್ಣೆಯಂತೆ ಮಧುರವಾಗಿ ಇರಬೇಕು ಎನ್ನುವ ಸಂದೇಶವೂ ಇದರಿಂದ ಸಿಗುವುದು.
ಕೃಷ್ಣ ಸಂದೇಶ ಜೀವನಕ್ಕೆ ಪೂರಕ
ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಭಗವಾನ್ ಶ್ರೀ ಕೃಷ್ಣ ಅರ್ಜುನನಿಗೆ ನೀಡಿದ ಜೀವನ ಸಂದೇಶವೇ ಭಗವದ್ಗೀತೆ.ಯುದ್ಧದ ಸಮಯದಲ್ಲಿ ಪಾರ್ಥನ ಗೊಂದಲ,ತೊಳಲಾಟಗಳನ್ನು ನಿವಾರಿಸಲು ನೀಡಿದ ಧರ್ಮ ಬೋಧನೆಯು ಜಗತ್ತಿಗೆ ಬೆಳಕು ಕೊಡುವ ಮಹಾನ್ ಚೇತನವಾಯಿತು.
ಜೀವನದ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆ ಯಲ್ಲಿ ಪರಿಹಾರವಿದೆ.ಗೀತೆಯ ಸಂದೇಶಗಳು
ಜೀವನವನ್ನು ಎದುರಿಸಲು ಸ್ಫೂರ್ತಿ ನೀಡುತ್ತದೆ.
- ಗೀತೆಯ ಬೋಧನೆಗಳನ್ನು ಯಾರು ಅನುಸರಿಸಿ,ಜೀವನದಲ್ಲಿ ಅಳವಡಿಸಿ ಕೊಳ್ಳುತ್ತಾರೋ ಅವರೆಲ್ಲರೂ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.
2.ಗೀತೆಯ ಪ್ರಕಾರ ಮನಸ್ಸು ನಮ್ಮ ಪ್ರತಿಯೊಂದು ದುಃಖ, ಕ್ಲೇಶ,ದ್ವಂದ್ವಕ್ಕೆ ಕಾರಣ.ಯಾರು ಮನಸ್ಸನ್ನು ಹಿಡಿತದಲ್ಲಿ ಇಟ್ಟು ಕೊಳ್ಳುತ್ತಾರೋ ಅವರು ಆಸೆ ,ಲೋಭ ಗಳಿಂದ ದೂರವಿರುತ್ತಾರೆ.
3.ಕೋಪವು ನಮ್ಮ ನಾಶದ ಮೂಲ.ಕೋಪದಿಂದ ಮನಸ್ಸಿನ ನಿಯಂತ್ರಣ ತಪ್ಪುವುದು,ನಮ್ಮ ಎಲ್ಲಾ ತಪ್ಪುಗಳಿಗೂ ಕಾರಣವಾಗುವುದು.ಹೀಗಾಗಿ ಸಮಚಿತ್ತದಿಂದ ಶಾಂತವಾಗಿ ಇರಬೇಕು ಎಂದು ಗೀತೆಯು ಸಂದೇಶ ನೀಡುತ್ತದೆ.
4.ಗೀತೆಯ ಪ್ರಕಾರ ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡಿದ ಕೆಲಸವೂ ಶ್ರೇಷ್ಠವಾದುದು ಮತ್ತು ಇದರ ಫಲ ಖಂಡಿತವಾಗಿ ಇನ್ಯಾವುದೋ ರೂಪದಲ್ಲಿ ಹಿಂದಿರುಗಿ ಬರುವುದು.
5.ನಂಬಿಕೆಯೇ ಬದುಕಿನ ತಳಹದಿ.ಸದಾ ಸಂತೋಷವಾಗಿ ಇರುತ್ತೇನೆ ಎನ್ನುವ ದೃಢವಾದ ನಂಬಿಕೆ ಇದ್ದರೆ ಬದುಕು ಕೂಡಾ ಹಾಗೆಯೇ ಇರುತ್ತದೆ.
ನಾವು ಬದುಕನ್ನು ಹೇಗೆ ಸ್ವೀಕರಿಸುತ್ತೇವೋ ಹಾಗೆಯೇ ನಮ್ಮ ಜೀವನವು ರೂಪುಗೊಳ್ಳುತ್ತದೆ.
ಗೀತೆಯ ಸಾರ ಬದುಕನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯುವ ದಾರಿದೀಪ.ಸನ್ಮಾರ್ಗದಲ್ಲಿ ನಡೆಯಲು ಸ್ಫೂರ್ತಿ ನೀಡುವ ಬೆಳಕು.ಬದುಕಿಗೆ ಪ್ರೇರಣೆ ನೀಡುವ ಜ್ಞಾನದ ಕಿಡಿ.ಭಗವದ್ಗೀತೆ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಲಿ. ಕೃಷ್ಣನ ಸಂದೇಶ ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಲಿ.
ಸರ್ವೇ ಜನಾಃ ಸುಖಿನೋ ಭವಂತು..
ಪ್ರಜ್ವಲಾ ಶೆಣೈ, ಕಾರ್ಕಳ…













