
ಲಂಡನ್: ಬರೋಬ್ಬರಿ 14 ವರ್ಷಗಳ ಕಾಲ ಬ್ರಿಟನ್ ನಲ್ಲಿ ಆಡಳಿತ ನಡೆಸಿದ ಕನ್ಸರ್ವೇಟಿವ್ ಪಕ್ಷಕ್ಕೆ ಈ ವರ್ಷ ಭಾರಿ ಸೋಲು ಉಂಟಾಗಿದ್ದು ಲೇಬರ್ ಪಕ್ಷವು ಪ್ರಚಂಡ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಈ ಚುನಾವಣೆಯ ಸೋಲನ್ನು ಒಪ್ಪಿಕೊಂಡು ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಐತಿಹಾಸಿಕ ಯುಕೆ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 650 ಸ್ಥಾನಗಳ ಪೈಕಿ 326 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಜಯಭೇರಿ ಸಾಧಿಸಿದೆ.
ದೇಶದ ಮೊದಲ ಬ್ರಿಟಿಷ್ ಭಾರತೀಯ ಮೂಲದ ಪ್ರಧಾನ ಮಂತ್ರಿ ರಿಷಿ ಸುನಕ್ ಉತ್ತರ ಇಂಗ್ಲೆಂಡ್ನಲ್ಲಿ 23,059 ಮತಗಳನ್ನು ಗಳಿಸಿ ತಮ್ಮದೇ ಆದ ರಿಚ್ ಮಂಡ್ ಮತ್ತು ನಾರ್ತಲರ್ಟನ್ ಸ್ಥಾನ ಗೆದ್ದುಕೊಂಡಿದ್ದಾರೆ. ಆದರೆ 14 ವರ್ಷಗಳ ಕಾಲ ಆಡಳಿತ ನಡೆಸಿ ಇದೀಗ ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಮರಳಿಸುವಲ್ಲಿ ವಿಫಲತೆ ಕಂಡಿದ್ದಾರೆ.