ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು

ಬೆಂಗಳೂರು: ಸಾರಿಗೆ ನೌಕರರ 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್ 5 ರಿಂದ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಇಳಿದಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಇಂದಿನಿಂದ ಬೆಳಗ್ಗೆಯಿಂದಲೇ ಮುಷ್ಕರಕ್ಕಿಳಿದಿದ್ದಾರೆ. ಇದರಿಂದ ರಾಜ್ಯಾದ್ಯಂತ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿ 1 ಕೋಟಿಗೂ ಹೆಚ್ಚು ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ.
ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ ಸೇರಿದಂಗೆ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಗೆ ಇಳಿದಿದ್ದು ತುರ್ತು ಕಾರ್ಯಗಳಿಗೆ ಪ್ರಯಾಣಿಕರು ಖಾಸಗಿ ಬಸ್, ಟ್ರಾವೆಲ್ಸ್, ಆಟೋ, ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ.
ಹೈಕೋರ್ಟ್ ಆದೇಶದ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದ್ದು ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿ ಮುಷ್ಕರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.































































































































