
ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಿಗೆ ಸಂಬಂಧಿಸಿ ಆಘಾತಕಾರಿ ವರದಿಯೊಂದು ಬಿಡುಗಡೆಯಾಗಿದ್ದು ಅದೇನೆಂದರೆ ಉಷ್ಣಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ ಬೆಂಗಳೂರು ಸೇರಿದಂತೆ ಭಾರತದ ನಗರಗಳಲ್ಲಿ ಹೆಚ್ಚಾಗಬಹುದು ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ.
ಕಿಂಗ್ಸ್ ಕಾಲೇಜ್ ಲಂಡನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಅಧ್ಯಯನ ನಡೆಸಿ ಮುಂಬರುವ ವರ್ಷಗಳಲ್ಲಿ ಭಾರತದ ನಗರಗಳಲ್ಲಿ ಉಷ್ಣ ಅಲೆ ಮುಂದುವರೆಯಲಿದೆ. ಇದಕ್ಕೆ ತಕ್ಷಣವೇ ದೀರ್ಘಾವಧಿಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ತಾಪಮಾನ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ವರದಿ ತಿಳಿಸಿದೆ.
ಹವಾಮಾನ ಮಾದರಿಗಳ ಆಧಾರದಲ್ಲಿ ಮಾಡಲಾದ ಅಧ್ಯಯನ ವರದಿಯಲ್ಲಿ, 2011ರ ಜನಗಣತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಬೆಂಗಳೂರು, ದೆಹಲಿ, ಫರೀದಾಬಾದ್, ಗ್ವಾಲಿಯರ್, ಕೋಟ, ಲುಧಿಯಾನ, ಮೀರತ್, ಸೂರತ್ ನಗರಗಳನ್ನು ಹೆಸರಿಸಲಾಗಿದೆ.