
ಢಾಕಾ: 2021ರಲ್ಲಿ ಬಾಂಗ್ಲಾದೇಶದ ಶ್ಯಾಮನಗರದ ಶತ್ಖಿರಾದಲ್ಲಿದ್ದ ಜೆಶೋರೇಶ್ವರಿ ದೇಗುಲದಲ್ಲಿರುವ ದೇವಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಕಿರೀಟವನ್ನು ನೀಡಿದ್ದು ಆದರೆ ರಾಜಕೀಯವಾಗಿ ಆಸ್ತಿರಗೊಂಡಿರುವ ಬಾಂಗ್ಲಾದೇಶದಲ್ಲಿ ಕಳ್ಳಕಾಕರ ಕಣ್ಣು ಈಗ ದೇವಿಯ ಮೇಲೂ ಬಿದ್ದಿದ್ದು, ದೇವಿಯನ್ನು ಅಲಂಕರಿಸುತ್ತಿದ್ದ ಚಿನ್ನದ ಕಿರೀಟವನ್ನೇ ಕಳ್ಳತನ ಮಾಡಿದ್ದಾರೆ.
ಗುರುವಾರ ದೇಗುಲದ ಪುರೋಹಿತರು ದೈನದಂದಿನ ಪೂಜಾ ಕಾರ್ಯಗಳನ್ನು ಮುಗಿಸಿ ಮನೆಗೆ ಹೋದ ನಂತರ ಮಧ್ಯಾಹ್ನ 2 ಗಂಟೆಯಿಂದ 2.30ರ ನಡುವೆ ಈ ಕಳ್ಳತನ ಕೃತ್ಯ ನಡೆದಿದ್ದು ದೇವಿಯ ಕಿರೀಟ ಕಳ್ಳತನವಾಗಿರುವುದು ಮೊದಲಿಗೆ ದೇಗುಲದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿಯ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ದೇಗುಲದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಶ್ಯಾಮ್ ನಗರ ಪೊಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ತೈಜುಲ್ ಇಸ್ಲಾಂ ಹೇಳಿದ್ದಾರೆ.
ದುರ್ಗೆಯನ್ನು ಇಲ್ಲಿ ಮಾತೆ ಕಾಳಿಯ ರೂಪದಲ್ಲಿ ಪೂಜೆ ಮಾಡಲಾಗುತ್ತಿದ್ದು 9 ದಿನಗಳ ಕಾಲ ದೇವಿಯನ್ನು ಆರಾಧನೆ ಮಾಡುವ ನವರಾತ್ರಿಯ ಸಮಯದಲ್ಲೇ ಇಂತಹ ಘಟನೆ ನಡೆದಿರುವುದು ಅಲ್ಲಿನ ದೇವಿ ಭಕ್ತರಲ್ಲಿ ಬೇಸರ ಮೂಡಿಸಿದೆ.













