ದೇವರ ಚಿಂತನೆ ನಿರಂತರವಾಗಿದ್ದಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ: ವಿದ್ವಾನ್ ವ್ಯಾಸರಾಜ ಆಚಾರ್ಯ

ಹೆಬ್ರಿ :ದೇವರ ಚಿಂತನೆಯನ್ನು ಮಾಡಲು ವಿವಿಧ ಮಾರ್ಗಗಳಿವೆ.ಅದರಲ್ಲಿ ಜ್ಞಾನ ಮಾರ್ಗವೇ ಶ್ರೇಷ್ಠವೆಂದು ವೇದಗಳು, ಪುರಾಣಗಳಲ್ಲಿ ಉಲ್ಲೇಖವಾಗಿದೆ. ವೇದಗಳು, ಶಾಸ್ತ್ರಗಳು, ಭಾಗವತ, ರಾಮಾಯಣ, ಮಹಾಭಾರತ ಕಾವ್ಯಗಳು, ಪುರಾಣಗಳು ದೇವರ ಅಪಾರ ಮಹಿಮೆಯನ್ನು ತಿಳಿಸುತ್ತದೆ.ಇಂದ್ರಿಯ ನಿಗ್ರಹದೊಂದಿಗೆ ಅಹಿಂಸಾ ಮಾರ್ಗವನ್ನು ಅನುಸರಿಸುತ್ತಾ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಜೀವನವನ್ನು ಸಾಗಿಸಬೇಕು. ಯಾವುದೇ ಕಾರ್ಯವಿರಲಿ ಅದರಲ್ಲಿ ಭಗವಂತನ ಚಿಂತನೆ ಇದ್ದಲ್ಲಿ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ನಮ್ಮ ಶರೀರ ಇರುವುದೇ ಉತ್ತಮ ಕಾರ್ಯವೆಸಗಲು ಎನ್ನುವುದರ ಅರಿವು ಇದ್ದಾಗ ನಾವು ಸಫಲತೆಯನ್ನು ಕಂಡು ಕೊಳ್ಳಬಹುದು. ವಿಷ್ಣು ದೇವರಿಗೆ ಪ್ರಿಯವಾದ ತುಳಸಿ ಅರ್ಚನೆಯಿಂದ ಸಕಲ ದುರಿತಗಳು ದೂರವಾಗಿ ಲೋಕಕ್ಕೆ ಕಲ್ಯಾಣವಾಗುತ್ತದೆ. ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದಲ್ಲಿ ಆರಾಧನೆಗೊಳ್ಳುವ ವಿಠ್ಠಲ ದೇವರು ಸರ್ವರಿಗೂ ಒಳಿತನ್ನು ದಯಪಾಲಿಸಲಿ ಎಂದು ಎಂದು ವೇದಾಂತ ವಿದ್ವಾನ್ ಮತ್ತು ಜ್ಯೋತಿಷಿ ಇರ್ವತ್ತೂರು ವ್ಯಾಸರಾಜ ಆಚಾರ್ಯ ಹೇಳಿದರು.
ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದ ವಿಠ್ಠಲ ದೇವರ ಸನ್ನಿಧಿಯಲ್ಲಿ ನಡೆದ ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡು ಧಾರ್ಮಿಕ ಪ್ರವಚನ ನೀಡಿದರು. ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಂ. ರಾಘವೇಂದ್ರ ಅಡಿಗ ಬೆಳಗುಂಡಿ ಮತ್ತು ಅರ್ಚಕ ನಾರಾಯಣ ಭಟ್ ನೇತೃತ್ವದಲ್ಲಿ ತುಳಸಿ ಅರ್ಚನೆ ನಡೆಯಿತು.ಹೆಬ್ರಿ ಮತ್ತು ಕಾರ್ಕಳ ತಾಲೂಕಿನ ವಿಪ್ರ ಬಾಂಧವರ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಂಡಿತು. ವಿಪ್ರ ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ಮತ್ತು ಭಜನಾ ಕಾರ್ಯಕ್ರಮ ಹಾಗೂ ಸ್ಯಾಕ್ಸೋಫೋನ್ ವಾದನ ನಡೆಯಿತು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.













