
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೋಕ್ಸೋ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದು ಅವರಿಗೆ ಬಿಜೆಪಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಶಾಸಕರಾದ ಸಿ.ಟಿ.ರವಿ, ರವಿಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ.
ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು ಲೋಕಸಭಾ ಚುನಾವಣೆ ಬಳಿಕ ಹತಾಶೆಗೊಂಡಿರುವ ಕಾಂಗ್ರೆಸ್ ಸೇಡಿನ ರಾಜಕೀಯಕ್ಕಿಳಿದಿದೆ. ಪ್ರಕರಣದಲ್ಲಿ ಬಂಧಿಸಲೆತ್ನಿಸುವ ಮೂಲಕ ಯಡಿಯೂರಪ್ಪ ಅವರನ್ನು ಮಾನಸಿಕ ಕುಗ್ಗಿಸುವ ಪ್ರಯತ್ನಕ್ಕೆ ಕೈಹಾಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಡಿಯೂರಪ್ಪ ಅವರ ಮೇಲೆ ದಾಖಲಾದ ಪೋಕ್ಸೋ ಪ್ರಕರಣ ರಾಜಕೀಯ ಪ್ರೇರಿತವಾದುದು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚೇನೂ ಹೇಳಲಾರೆ. ಅವರು ಶೀಘ್ರ ಈ ಪ್ರಕರಣದಿಂದ ಹೊರಬರಲಿದ್ದಾರೆ ಎಂದು ಹೇಳಿದ್ದಾರೆ
ಬಿ.ವೈ. ರಾಘವೇಂದ್ರ ಮಾತನಾಡಿ ಯಡಿಯೂರಪ್ಪ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ. ದೂರುದಾರ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಸ್ವತಃ ಗೃಹ ಸಚಿವ ಪರಮೇಶ್ವರ್ ಅವರೇ ಆಗ ಹೇಳಿದ್ದರು. ಬಿ ರಿಪೋರ್ಟ್ ಹಾಕುವಂತಹ ಪ್ರಕರಣವಿದು. ದುರುದ್ದೇಶದಿಂದ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ ಎಂದು ಕಿಡಿಕಾರಿದರು.