
ಹುಬ್ಬಳ್ಳಿ: ಬುಧವಾರ ಬೆಳಗಿನ ಜಾವ ಹುಬ್ಬಳ್ಳಿಯ ವೀರಾಪುರ ಓಣಿ ಕರಿಯಮ್ಮನ ಗುಡಿಬಳಿ ಪಾಗಲ್ ಪ್ರೇಮಿಯೊಬ್ಬ ಯುವತಿಯೊಬ್ಬಳು ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡು ಆಕೆಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ.
ಯಲ್ಲಾಪುರ ಓಣಿಯ ಗಿರೀಶ (ವಿಶ್ವ) ಎಸ್. ಸಾವಂತ ಎಂಬಾತ ಅಂಜಲಿ ಮೋಹನ ಅಂಬಿಗೇರ (21) ಎಂಬಾಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಗಿರೀಶ ಅಂಜಲಿಯನ್ನು ಪ್ರೀತಿಸುತ್ತಿದ್ದು ಆದರೆ ಅಂಜಲಿ ಪ್ರೀತಿ ನಿರಾಕರಿಸಿದ್ದಕ್ಕೆ ಹುಚ್ಚು ಪ್ರೇಮಿಯಾದ ಆತ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆಯ ಬಾಗಿಲು ಬಡೆದಿದ್ದಾನೆ. ಆಗ ಅಂಜಲಿಯೇ ಬಾಗಿಲು ತೆರೆದಾಗ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಗಿರೀಶ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬೆಂಡಿಗೇರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.