
ಮುಂಬಯಿ: ಬುಧವಾರ ಮುಂಬಯಿ ಕರಾವಳಿಯಲ್ಲಿ ಪ್ರಸಿದ್ಧ ಪ್ರವಾಸಿ ತಾಣ ಎಲಿಫೆಂಟಾ ಗುಹೆಗಳತ್ತ ಸಾಗುತ್ತಿದ್ದ ಪ್ರಯಾಣಿಕ ದೋಣಿ (ಫೆರ್ರಿ)ಗೆ ನೌಕಾಪಡೆಯ ವೇಗದ ಬೋಟ್ ಢಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತರಲ್ಲಿ 10 ಪ್ರವಾಸಿಗರು, ಓರ್ವ ನೌಕಾಪಡೆ ಸಿಬಂದಿ ಮತ್ತು ಬೋಟ್ ಎಂಜಿನ್ ಪೂರೈಕೆ ಮಾಡಿದ್ದ ಸಂಸ್ಥೆಯ ಇಬ್ಬರು ನೌಕರರು ಸೇರಿದ್ದು ಈ ವೇಳೆ ಒಟ್ಟು 101
ಮಂದಿಯನ್ನು ರಕ್ಷಿಸಲಾಗಿದೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.
ದುರ್ಘಟನೆ ಹಿನ್ನೆಲೆ:
‘ನೀಲ್ ಕಮಲ್’ ಹೆಸರಿನ ಫೆರ್ರಿ ದೋಣಿ 110 ಪ್ರಯಾಣಿಕರೊಂದಿಗೆ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟಿದ್ದು ಇತ್ತ ಸಮುದ್ರದಲ್ಲಿ ನೌಕಾಪಡೆಗೆ ಸೇರಿದ ಸ್ಪೀಡ್ ಬೋಟ್ ಪರೀಕ್ಷಾರ್ಥ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಓಡಾಟ ನಡೆಸುತ್ತಿತ್ತು. ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಬೋಟ್‌ನ ವೇಗ ಏಕಾಏಕಿ ಹೆಚ್ಚಿ, ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕ ದೋಣಿಗೆ ಢಿಕ್ಕಿ ಹೊಡೆಯಿತು. ದೋಣಿಯಲ್ಲಿದ್ದ ಪ್ರವಾಸಿಗರೊಬ್ಬರು ಘಟನೆಯ ವೀಡಿಯೋ ಮಾಡಿದ್ದು ವೈರಲ್ ಆಗಿದೆ.
ಅನಾಹುತ ನಡೆಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ನೌಕಪಡೆ, ಕರಾವಳಿ ಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿವೆ. ನೌಕಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ನೌಕಾಪಡೆಯ 11 ಕ್ರಾಫ್ಟ್‌ಗಳು, ಕರಾವಳಿ ಕಾವಲು ಪಡೆಯ ಒಂದು ಬೋಟ್ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ನೌಕಾಪಡೆ ಸ್ಪೀಡ್ ಬೋಟ್ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.