
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದ್ದು ಅದೇನೆಂದರೆ ಪ್ರತಿ ವರ್ಷ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಎಂದು ಹೇಳಿದೆ.
ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಹೆಚ್ಚಾಗುತ್ತಿದ್ದು ಎಲ್ಲಾ ನೌಕರರೂ ಚರಾಸ್ತಿ-ಸ್ಥಿರಾಸ್ತಿಗಳನ್ನು ವೆಬ್‌ಸೈಟ್‌ನಲ್ಲಿ ಘೋಷಿಸಬೇಕು ಎಂದು ಲೋಕಾಯುಕ್ತ ಹೇಳಿದಾಗ ಇದಕ್ಕೆ ಸರ್ಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದೀಗ ಸರ್ಕಾರ ಜಾಣನಡೆ ಅನುಸರಿಸಿದ್ದು ಪ್ರತಿಯೊಬ್ಬ ಸರ್ಕಾರಿ ನೌಕರರು ಸರ್ಕಾರಿ ಸೇವೆಗೆ ಸೇರುವಾಗ ಹಾಗೂ ಪ್ರತಿ ವರ್ಷ ನೌಕರರ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸೋದು ಈಗಾಗಲೇ ಕಡ್ಡಾಯವಾಗಿದೆ. ಅದರಂತೆ ಲೋಕಾಯಕ್ತದವರು ಯಾವ ಅಧಿಕಾರಿಗಳ ಬಗ್ಗೆ ಆಸ್ತಿ ವಿವರ ಕೇಳುತ್ತಾರೋ ವಿಳಂಬವಿಲ್ಲದೇ ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಈ ಸೂಚನೆಗಳನ್ನು ಪಾಲಿಸದಿದ್ದರೆ ಇಲಾಖಾ ಮುಖ್ಯಸ್ಥರು ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.





















