
ನವದೆಹಲಿ: ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ 37 ದಿನಗಳ ಪ್ರತಿಭಟನೆಯನ್ನು ಹಿಂಪಡೆದಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ), ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟ ಇನ್ನೂ ಅಂತ್ಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮಾತನಾಡಿ, ಪ್ರತಿಭಟನೆಯ ಫಲಿತಾಂಶವನ್ನು ಪರಿಶೀಲಿಸಿದ ಬಳಿಕ ಸಂಘಟನೆಯ ಮುಂದಿನ ಕಾರ್ಯತಂತ್ರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು. “ಪ್ರತಿಭಟನೆ ಈಗಷ್ಟೇ ಮುಕ್ತಾಯಗೊಂಡಿದೆ. ಮುಂದಿನ ಹಂತದ ಬಗ್ಗೆ ಸದ್ಯ ಯೋಜನೆ ರೂಪಿಸಲಾಗುತ್ತಿದೆ,” ಎಂದರು.
ಪಂಜಾಬ್‌ನಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿಚಾರವನ್ನೂ ಸಂಘಟನೆ ಕೈಗೆತ್ತಿಕೊಳ್ಳಲಿದ್ದು, ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಯಾವುದೇ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಬಾರದು ಎಂಬುದು ನಮ್ಮ ನಿಲುವು ಎಂದು ಡಿಪ್ಕೆ ತಿಳಿಸಿದರು.
ಕೇಂದ್ರ ಸಚಿವರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿದ ಬಳಿಕ ಸಿಜೆಪಿ ದೇಶವ್ಯಾಪಿ ಪ್ರತಿಭಟನೆಯನ್ನು ಹಿಂಪಡೆದಿತ್ತು. ಜೊತೆಗೆ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಕುರಿತು ಚರ್ಚಿಸಲು ನಾಲ್ಕು ವಾರಗಳ ಬಳಿಕ ಮತ್ತೊಮ್ಮೆ ಸಭೆ ನಡೆಸಲು ಸರ್ಕಾರ ಮತ್ತು ಸಿಜೆಪಿ ಒಪ್ಪಿಕೊಂಡಿವೆ.


















































