
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರನ್ನ ಎಳೆದು ತರುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ದೇವೇಗೌಡರ ಭೇಟಿ ಬಳಿಕ ಪ್ರಜ್ವಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂಬ ಕಾಂಗ್ರೆಸ್ ನಾಯಕರ ಮಾತಿಗೆ ಉತ್ತರ ನೀಡಿದ ಅವರು, ಈ ಪ್ರಕರಣದಲ್ಲಿ ದೇಶದ ಪ್ರಧಾನಿಗಳನ್ನ ಎಳೆದು ತರೋದು ಸರಿಯಲ್ಲ, ಸೂಕ್ತವಲ್ಲ. ಮೋದಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದರು.ರೇವಣ್ಣ ವಿಚಾರ ಆಗಲಿ, ಹಾಸನ ಸಂಸದರ ವಿಚಾರ ಆಗಲಿ ನಾನು ಅನೇಕ ಸಮಯದಲ್ಲಿ ನಾನು ಮಾಧ್ಯಮಗಳಲ್ಲಿ ಹೇಳಿದ್ದೇನೆ. ನನ್ನ ರಾಜಕೀಯ ಬದುಕು, ನನ್ನ ಪಕ್ಷ, ನಾನು ಪಕ್ಷದ ಕಾರ್ಯಕರ್ತನಾಗಿ ನಾನು ಹೆಚ್ಚು ಹಾಸನ ಜಿಲ್ಲೆಗೆ ಕಾಲಿಟ್ಟವನು ಅಲ್ಲ. ಹಾಸನಾಂಬೆ ದರ್ಶನಕ್ಕೆ ಮಾತ್ರ ಹೋಗಿರೋದು ಮಾತ್ರ ಪ್ರತಿವರ್ಷ. ಅದು ಬಿಟ್ಟರೆ ನಾನು ಯಾವತ್ತೂ ಹೋಗಿಲ್ಲ. ನನಗೂ ಮತ್ತು ಹಾಸನ ಸಂಸದರಿಗೂ ಹೆಚ್ಚಿನ ಸಂಪರ್ಕ ಇಲ್ಲ ಇದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಇಚ್ಛೆಸುವುದಿಲ್ಲ ಎಂದರು