
ಬೆಂಗಳೂರು: ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎಸ್‌ಐಟಿ ಕಸ್ಟಡಿಗೆ ಪಡೆದ ಅವಧಿಯು ಜೂ.6ಕ್ಕೆ ಮುಕ್ತಾಯಗೊಳ್ಳಲಿದೆ.
ಪ್ರಜ್ವಲ್ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ವಿಚಾರಣೆಗೆ ಕೊಂಚ ಹಿನ್ನಡೆಯಾಗಿದ್ದು ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಇಂದು ಪ್ರಜ್ವಲ್‌ರನ್ನು ಎಸ್‌ಐಟಿಯು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಬೇಕಿದ್ದು ಹೀಗಾಗಿ ಎಸ್‌ಐಟಿಯು ಗುರುವಾರ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆಗಳಿವೆ. ಇದಾದ ಬಳಿಕ ಪ್ರಜ್ವಲ್ ವಿರುದ್ಧ ಎಸ್‌ಐಟಿಯಲ್ಲಿ ದಾಖಲಾಗಿರುವ ಇನ್ನೂ 3 ಪ್ರಕರಣಗಳಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ.
ಮತ್ತೊಂದೆಡೆ ಪ್ರಜ್ವಲ್ ವಿರುದ್ಧ ಸಂತ್ರಸ್ತೆಯರು ಕೊಟ್ಟಿರುವ ಪ್ರತ್ಯೇಕ 3 ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೂನ್ 7ಕ್ಕೆ ಮುಂದೂಡಿತ್ತು. ಇದೀಗ ಈ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜಾಮೀನು ಮಂಜೂರಾಗಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.