
ನವದೆಹಲಿ: ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪೆಟ್ರೋಲ್ ಡೀಸೆಲ್ ದರ ಏರಿಕೆಯ ಕುರಿತು ಭಾನುವಾರ ಟ್ವೀಟ್ ಮಾಡಿದ್ದು ಪೆಟ್ರೋಲ್ ದರ ಏರಿಕೆಯಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಬಯಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 8500 ರು, ವರ್ಗಾಯಿಸುವ ಭರವಸೆಯನ್ನು ಈಡೇರಿಸದ ಕಾಂಗ್ರೆಸ್, ತನ್ನ ಆಡಳಿತದ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ದರವನ್ನು 3 ರು. ಹೆಚ್ಚಿಸಿ ಕರ್ನಾಟಕದ ಜನರಿಗೆ ಹೊರೆ ಮಾಡಿದೆ. ಇಂಧನ ಬೆಲೆಗಳು ಎಲ್ಲಾ ಸರಕುಗಳ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಕರ್ನಾಟಕದ ಜನರು ಆಹಾರ ಪದಾರ್ಥಗಳು, ಬಟ್ಟೆ, ಔಷಧಿಗಳು ಮತ್ತು ಮೂಲಭೂತ ಅಗತ್ಯಗಳ ಎಲ್ಲಾ ವಸ್ತುಗಳಿಗೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ’ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಗರಿಷ್ಠ 3.50 ರೂಪಾಯಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಸದ್ಯದ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಆದಾಯ ಕ್ರೋಡಿಕರಿಸಲು ರಾಜ್ಯ ಸರ್ಕಾರ ಹಲವು ಮೂಲಗಳನ್ನು ಹುಡುಕುತ್ತಿದೆ. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನೇರವಾಗಿ ಜನಸಾಮಾನ್ಯರಿಗೆ ತಟ್ಟಲಿದೆ ಎಂದು ಹೇಳಿದ್ದಾರೆ.