
ಮಂಗಳೂರು: ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡಿ ಆ ಹಣದಲ್ಲೇ ಶಾಲೆ ಕಟ್ಟಿದ ಕೀರ್ತಿ ಪಡೆದ ‘ಪದ್ಮಶ್ರೀ’ ಹರೇಕಳ ಹಾಜಬ್ಬರ ಹಲವು ವರ್ಷಗಳ ಕನಸಾಗಿದ್ದ ಪಿಯು ಕಾಲೇಜು ಕೊನೆಗೂ ಜೂ.1ಕ್ಕೆ ಶುಭಾರಂಭಗೊಳ್ಳಲಿದೆ. ನೂತನ ಪಿಯು ಕಾಲೇಜಿಗೆ ಈವರೆಗೆ (ಮೇ 30ರವರೆಗೆ) 25 ಮಂದಿ ಅರ್ಜಿ ಪಡೆದುಕೊಂಡಿದ್ದು, ಅದರಲ್ಲಿ 14 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಮಕ್ಕಳ ದಾಖಲಾತಿಗೆ ಇನ್ನೂ 10-15 ದಿನ ಇರುವುದರಿಂದ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಹಾಜಬ್ಬ ಇಟ್ಟುಕೊಂಡಿದ್ದಾರೆ.
ಈಗಿರುವ ಶಾಲೆ ಕೊಠಡಿಯಲ್ಲೇ ತಾತ್ಕಾಲಿಕವಾಗಿ ಕಾಲೇಜು ಆರಂಭವಾಗಲಿದೆ. ಕೆಲ ವರ್ಷಗಳಿಂದ ಪಿಯು ಕಾಲೇಜು ಆರಂಭಿಸಲು ಜಿಲ್ಲಾಡಳಿತ, ಸರ್ಕಾರ, ಸಚಿವರಾದಿಯಾಗಿ ಎಲ್ಲರ ಬಳಿಯೂ ಮನವಿ ಮಾಡಿಕೊಂಡ ಪರಿಣಾಮ ಈ ಶೈಕ್ಷಣಿಕ ವರ್ಷದಿಂದಲೇ ಪಿಯು ಕಾಲೇಜು ಆರಂಭಕ್ಕೆ ಸರ್ಕಾರೂ ಅನುಮತಿ ನೀಡಿದ್ದು ಈಗಿರುವ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಆದೇಶ ನೀಡಿತ್ತು. ಹಾಜಬ್ಬರ ಇತ್ತೀಚಿನ ಅತಿದೊಡ್ಡ ಕನಸು ಈ ಮೂಲಕ ನನಸಾಗುತ್ತಿದ್ದು ಹಾಜಬ್ಬರ ಪಿಯು ಕಾಲೇಜಿಗೆ ಕಾಮರ್ಸ್ ಮತ್ತು ಆರ್ಟ್ಸ್ ಕೋರ್ಸ್‌ಗಳು ಮಂಜೂರಾಗಿವೆ.
ಪಿಯು ಕಾಲೇಜಿಗೆ ಈಗಿರುವ ಶಾಲೆಯ ಅರ್ಧ ಫರ್ಲಾಂಗು ದೂರದ ಗ್ರಾಮ ಚಾವಡಿಯಲ್ಲಿ 1.3 ಎಕರೆ ಜಾಗವೂ ಮಂಜೂರಾಗಿದ್ದು ಅದಕ್ಕೆ ಕಟ್ಟಡ ಕಟ್ಟಲು ಇಂಡಿಯನ್ ಆಯಿಲ್ ಕಂಪೆನಿ ಭರವಸೆ ನೀಡಿ ಈಗಾಗಲೇ ಪರಿಶೀಲನೆಯನ್ನೂ ನಡೆಸಿದೆ. ಹೊಸ ಕಟ್ಟಡ ಆರಂಭಿಸಲು ಸಮಯ ಇರುವುದರಿಂದ ಈಗ ಇರುವ ಪ್ರೌಢಶಾಲೆಯ 9ನೇ ತರಗತಿ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಪಿಯು ತರಗತಿ ಆರಂಭಿಸಲು ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ಹರೇಕಳ ಹಾಜಬ್ಬ ತಿಳಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಹರೇಕಳ ಹಾಜಬ್ಬ 2004ರಲ್ಲಿ ‘ಕನ್ನಡಪ್ರಭ’ ಪತ್ರಿಕೆ ನನ್ನನ್ನು ಗುರುತಿಸಿದ ಬಳಿಕ ನಾಡಿನೆಲ್ಲೆಡೆಯಿಂದ ನೆರವು ಹರಿದು ಬಂದಿದ್ದು, ಪ್ರಾಥಮಿಕ ಶಾಲೆ, ಹೈಸ್ಕೂಲು ಕನಸು ಸಾಕಾರಗೊಂಡಿದೆ. ಇದೀಗ ಪಿಯು ಕಾಲೇಜು ಆರಂಭವಾಗುತ್ತಿರುವುದು ಸಂತಸ ತಂದಿದೆ. ಅದಕ್ಕೆ ಕಾರಣರಾದ ಉಳ್ಳಾಲ ಕ್ಷೇತ್ರದ ಶಾಸಕರು, ಸರ್ಕಾರ, ಸಂಬಂಧಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.