
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
86 ವರ್ಷ ವಯಸ್ಸಿನ ತುಳಸಿ ಗೌಡ ಅವರು ಸೋಮವಾರ ಸಂಜೆ ವಯೋಸಹಜತೆಯಿಂದ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕರ್ನಾಟಕದ ಗೌರವಾನ್ವಿತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇವರು ಪರಿಸರ ಸಂರಕ್ಷಣೆಗೆ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತಾರೆ. ಅವರ ಕೆಲಸ ನಮ್ಮ ಭೂಮಿಯನ್ನು ರಕ್ಷಿಸಲು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತುಳಸಿ ಗೌಡ ಅವರು ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದು ಈವರೆಗೆ ಲಕ್ಷಾಂತರ ಗಿಡಗಳನ್ನು ಬೆಳೆಸಿ ಪಾಲನೆ ಮಾಡಿದ ಕೀರ್ತಿ ಇವರದ್ದಾಗಿದೆ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಇಲಾಖೆಯಿಂದ ಹೇಳದಿದ್ದರೂ ಸಂಬಳ ಬಯಸದೇ ಸೇವೆ ರೂಪದಲ್ಲಿ ಅರಣ್ಯ ಬೆಳಸುವ ಕಾಯಕಕ್ಕೆ ಕೈಹಾಕಿದರು. ಇದಲ್ಲದೇ ಅರಣ್ಯದಲ್ಲಿ ಅಳವಿನಂಚಿನಲ್ಲಿ ಇರುವ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದ ಕೀರ್ತಿ ತುಳಸಿ ಗೌಡ ಅವರಿಗೆ ಸಲ್ಲುತ್ತದೆ.