
ಬೆಂಗಳೂರು: ನಗರದ ಬಾಗಲಗುಂಟೆಯಲ್ಲಿ ಜಿಮ್ ಟ್ರೈನರ್ ಒಬ್ಬ ಪತ್ನಿಗೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಲು ಯತ್ನಿಸಿ ಸಾವಿಗೀಡಾದ ಘಟನೆ ಸಂಭವಿಸಿದೆ.
ಬಿಹಾರ ಮೂಲದವರಾದ ಅಮಿತ್ ಕುಮಾರ್ (28) ಎಂಬ ವ್ಯಕ್ತಿ ಸುಮಾರು ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಹಾಸನ ಮೂಲದ ಯುವತಿಯನ್ನ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಹಾಗೂ ಅಮಿತ್ ನಡುವೆ ಗಲಾಟೆ ನಡೆದು, ಆಕೆ ತವರು ಮನೆ ಸೇರಿದ್ದಳು. ಇದರಿಂದ ಬೇಸತ್ತ ಅಮಿತ್ ಆಕೆಗೆ ವೀಡಿಯೋ ಕಾಲ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದ್ದು, ನೇಣು ಬಿಗಿದುಕೊಂಡಿದೆ. ಇದರಿಂದ ಆತ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ.
ಮೂರು ವರ್ಷಗಳ ಹಿಂದೆ ಅಮಿತ್ ಮದುವೆಯಾಗಿದ್ದು ಕಳೆದ ಮೂರು ತಿಂಗಳ ಹಿಂದೆ ಅಮಿತ್ ಪತ್ನಿ ನರ್ಸಿಂಗ್ ಕೆಲಸಕ್ಕೆ ಸೇರಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಈ ಹಿಂದೆ ಜಗಳ ನಡೆದಿತ್ತು. ಇದಾದ ಬಳಿ ಆಕೆ ತವರು ಮನೆ ಸೇರಿದ್ದಳು. ಕಳೆದ ವಾರ ಆಕೆಯನ್ನು ಕರೆದುಕೊಂಡು ಬಂದಿದ್ದ ಅಮಿತ್ ಮತ್ತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದ. ಇದರಿಂದ ಮನನೊಂದ ಮಹಿಳೆ ಮರಳಿ ತವರು ಮನೆಗೆ ಹೋಗಿದ್ದಳು. ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ.