
ನವದೆಹಲಿ: ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ತಮ್ಮ ಪತಂಜಲಿ ಉತ್ಪನ್ನಗಳ ಬಗ್ಗೆ ಜನರ ದಾರಿ ತಪ್ಪಿಸುವಂತಹ ಜಾಹೀರಾತು ನೀಡಿ ಸುಪ್ರೀಂಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಪಟ್ಟು ಇಂದು ಪತ್ರಿಕೆಗಳಲ್ಲಿ ಜಾಹೀರಾತಿನಷ್ಟೇ ದೊಡ್ಡದಾಗಿ ಕ್ಷಮೆಯಾಚನೆಯ ಪ್ರಕಟಣೆ ಹೊರಡಿಸಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ನಿನ್ನೆಯೂ 10 ಲಕ್ಷ ರೂಪಾಯಿ ವೆಚ್ಚ ಮಾಡಿ ಪತಂಜಲಿ ಸಂಸ್ಥೆ ಪತ್ರಿಕೆಗಳಲ್ಲಿ ಬಹಿರಂಗ ಕ್ಷಮೆಯಾಚನೆಯನ್ನು ಪ್ರಕಟಿಸಿತ್ತು. ಆದರೆ ಸುಪ್ರೀಂಕೋರ್ಟ್ ಈ ಕ್ಷಮೆಯಾಚನೆ ಪ್ರಕಟಣೆಯ ಗಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ದೇಶದ ಪ್ರಮುಖ ಪತ್ರಿಕೆಗಳಲ್ಲಿ ದೊಡ್ಡದಾಗಿ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ತಾವು ವೈಯಕ್ತಿಕವಾಗಿಯೂ ಹಾಗೂ ಪತಂಜಲಿ ಆಯುರ್ವೇದ ಪರವಾಗಿ ಭಾರತದ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.
ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ನಾವು ಶ್ರದ್ಧೆಯಿಂದ ಕ್ಷಮೆಯಾಚಿಸುತ್ತೇವೆ ಮತ್ತು ಅಂತಹ ದೋಷಗಳು ಇನ್ನುಮುಂದೆ ಪುನರಾವರ್ತನೆಯಾಗುವುದಿಲ್ಲ ಎಂಬುದು ನಮ್ಮ ತುಂಬು ಹೃದಯದ ಭರವಸೆಯಾಗಿದೆ ಎಂದು ಕ್ಷಮೆಯಾಚನೆಯಲ್ಲಿ ಹೇಳಲಾಗಿದೆ.