
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರ ಸಂಘಟನೆಗಳು ಮತ್ತು ಸರ್ಕಾರದ ನಡುವೆ ವೇತನ ಹೆಚ್ಚಳ ಹಿಂಬಾಕಿ, ವೇತನ ಪರಿಷ್ಕರಣೆ ಸಂಬಂಧ ಸೋಮವಾರ ನಡೆದ ಮಾತುಕತೆ ವಿಫಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೌಕರರ ಬೇಡಿಕೆಯಂತೆ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ. ಕೇವಲ 14 ತಿಂಗಳ ಹಿಂಬಾಕಿ ನೀಡಲು ಸಿದ್ಧ’ ಎಂದು ಹೇಳಿದ್ದು ಆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.
ಜತೆಗೆ ಸಂಘಟನೆಗಳು ಕೇಳುತ್ತಿರುವಷ್ಟು ವೇತನ ಹೆಚ್ಚಳ, ಹಿಂಬಾಕಿ ಪಾವತಿ ಸಾಧ್ಯವಿಲ್ಲ. 38 ತಿಂಗಳ ಬದಲು 14 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದು ಆದರೆ ಮುಖ್ಯಮಂತ್ರಿ ಅವರ ಭರವಸೆಗೆ ಒಪ್ಪದ ಸಂಘಟನೆಗಳ ಪ್ರಮುಖರು, ತಮ್ಮ ಬೇಡಿಕೆಯಂತೆ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ ವೇತನ ಹೆಚ್ಚಳಕ್ಕೆ ಸರ್ಕಾರ ಆದೇಶಿಸಬೇಕು ಮತ್ತು ಆ ಬಗ್ಗೆ ಲಿಖಿತವಾಗಿ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಸತತ 2 ಗಂಟೆಗಳ ಕಾಲ ಈ ಹಗ್ಗ ಜಗ್ಗಾಟದ ನಂತರವೂ ಅಂತಿಮ ತೀರ್ಮಾನ ತೀರ್ಮಾನವೊಂದಕ್ಕೆ ಬರಲಾಗಲಿಲ್ಲ. ಹೀಗಾಗಿ ಸಭೆ ವಿಫಲವಾಯಿತು ಮತ್ತು ಮುಷ್ಕರ ನಡೆಸುವ ತಮ್ಮ ನಿಲುವನ್ನು ಬದಲಿಸುವುದಿಲ್ಲ ಎಂದು ಸಂಘಟನೆಗಳ ಪ್ರಮುಖರು ಪ್ರಕಟಿಸಿದ್ದಾರೆ.














































