‘ನೀಟ್ ಹೋರಾಟ ರಾಜಕೀಯಕ್ಕೆ ಬಳಸದಿರಿ’ ಮನವಿ ಮಾಡಿದ ಸಲ್ಮಾನ್ ಖಾನ್

ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳ ಹೋರಾಟವನ್ನು ಶ್ಲಾಘಿಸಿ, ಇದನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಆರಂಭದಲ್ಲಿ ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿತ್ತು. ಆದರೆ ಅದು ಹಿಂಸಾತ್ಮಕ ತಿರುವು ಪಡೆದಿರುವುದು ನೋವು ತಂದಿದೆ. ಈ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಬಗ್ಗೆ ನನಗೆ ತೀವ್ರ ಕಳವಳವಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ವಿದ್ಯಾರ್ಥಿಗಳು ಒಂದಾಗಿ ಹೋರಾಡುತ್ತಿರುವುದು ಹಾಗೂ ಅವರಿಗೆ ಪೋಷಕರು ಬೆಂಬಲ ನೀಡುತ್ತಿರುವುದು ಸಂತೋಷದ ಸಂಗತಿ ಎಂದು ಅವರು ತಿಳಿಸಿದ್ದಾರೆ. ಉತ್ತಮ ಭವಿಷ್ಯ ಮತ್ತು ಸುಶಿಕ್ಷಿತ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ತೋರಿಸುತ್ತಿರುವ ಪ್ರಾಮಾಣಿಕತೆ ಶ್ಲಾಘನೀಯ ಎಂದು ಹೇಳಿದ್ದಾರೆ.
ಈ ಹೋರಾಟ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ್ದು, ಇದಕ್ಕೆ ರಾಜಕೀಯ ಬಣ್ಣ ಬಳಿಯಬಾರದು. ಈ ಹೋರಾಟದ ಸಂಪೂರ್ಣ ಶ್ರೇಯ ವಿದ್ಯಾರ್ಥಿಗಳಿಗೆ ಸಲ್ಲಬೇಕು. ಸರ್ಕಾರವೂ ವಿದ್ಯಾರ್ಥಿಗಳ ಪರ ನಿಂತು ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವಿದೆ ಎಂದು ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತ ಜಾಗತಿಕ ಶಿಕ್ಷಣ ಕೇಂದ್ರವಾಗಿ ಬೆಳೆಯಬೇಕು. ವಿದೇಶಗಳಿಂದಲೂ ವಿದ್ಯಾರ್ಥಿಗಳು ಭಾರತಕ್ಕೆ ಶಿಕ್ಷಣಕ್ಕಾಗಿ ಬರುವಂತಾಗಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದು ನೈತಿಕ ಬೆಂಬಲವಾಗಿ ಪರಿಣಮಿಸಿದೆ.


















































