
ಬೆಳಗಾವಿ: ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ, ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು ಆದರೆ, ಇದೀಗ ಆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಮಾತನಾಡಿ ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಕೊಟ್ಟಿದ್ದೆವು. ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಿದ್ದೇವೆ ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ನಾಳೆ ಕ್ರೆಡಿಟ್ ಆಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಎರಡು ಸಾವಿರ ರೂಪಾಯಿ ಕೊಟ್ಟು ನಾಲ್ಕು ಸಾವಿರ ರೂಪಾಯಿ ಕಸಿದುಕೊಳ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು ಬಿಜೆಪಿಯವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಪೆಟ್ರೋಲ್ ದರ ಏರಿಕೆ ಆಗಿದೆ ಎಂದು ಹೇಳಿದ್ದಾರೆ. ಇದೇ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಪೆಟ್ರೋಲ್ ದರವನ್ನು ನೂರು ರೂಪಾಯಿ ತಗೊಂಡು ಹೋಗಿದ್ದರು. ನಲವತ್ತು ರೂಪಾಯಿ ಪೆಟ್ರೋಲ್ ದರ ಏರಿಸಿದ್ದ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಹೋಗುತ್ತದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಸರ್ಕಾರ ಐದು ವರ್ಷ ಕಾರ್ಯಭಾರ ಮಾಡಲಿದ್ದು ಐದು ವರ್ಷ ಕೂಡ ಗೃಹಲಕ್ಷ್ಮಿ ಮನೆ ಮನೆ ಬಾಗಿಲಿಗೆ ಹೋಗುತ್ತಾಳೆ. ಯಾರು ಕೂಡ ಆತಂಕಕ್ಕೊಳಗಾಗುವುದು ಬೇಡ. ಕೊಟ್ಟ ಭಾಷೆಯಂತೆ ಪ್ರತಿ ತಿಂಗಳು ತಪ್ಪದೆ ಹಣ ಹಾಕುತ್ತೇವೆ. ಯಾರೂ ಏನೇ ಮಾತನಾಡಿದರೂ, ಬಿಜೆಪಿಯವರು ಹೇಳಿದರೂ ಕಿವಿಗೊಡಬೇಡಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.