
ಕಾನ್ಪುರ: ಉತ್ತರ ಪ್ರದೇಶದ ಕಾನ್ಸುರದಲ್ಲಿ ಬಿಲ್ಹೌರ್ ಪ್ರದೇಶದ ಬಂಭಿಯಾನ್‌ಪುರ ಗ್ರಾಮದ ಶುಭಾಷ್ ಸೈನಿ ಎಂಬುವವರ ಮನೆಯಲ್ಲಿ ಪೌರಾಣಿಕ ಹಿನ್ನೆಲೆಯ ಭಗವತ್ ಕಥಾ ನಿರೂಪಣಾ ಕಾರ್ಯಕ್ರಮದ ವೇದಿಕೆಯಲ್ಲಿ ಪೌರಾಣಿಕ ಪಾತ್ರವಾದ ಕಾಳಿಮಾತೆಯ ವೇಷ ಧರಿಸಿದ 14 ವರ್ಷದ ಬಾಲಕ ಆ ವೇಷದಲ್ಲಿದ್ದಾಗಲೇ ರಾಕ್ಷಸ ವೇಷ ಹಾಕಿದ 11 ವರ್ಷದ ಬಾಲಕನ ಕತ್ತು ಸೀಳಿದ ಆಘಾತಕಾರಿ ಘಟನೆ ನಡೆದಿದೆ.
ಕೂಡಲೇ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಗಂಭೀರ ಗಾಯಗೊಂಡಿದ್ದ ಬಾಲಕ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಳಿ ವೇಷ ಧರಿಸಿದ್ದ 14 ವರ್ಷದ ಬಾಲಕನ್ನು ವಶಕ್ಕೆ ಪಡೆದಿದ್ದಾರೆ.
ರಾಕ್ಷಸನ ಪಾತ್ರವನ್ನು ಮಾಡುತ್ತಿದ್ದ ಮಗುವನ್ನು ಹತ್ಯೆ ಮಾಡಿದಂತೆ ನಟಿಸಲು ತ್ರಿಶೂಲವನ್ನು ಬಳಸುವಂತೆ 14ರ ಬಾಲಕನಿಗೆ ಸೂಚಿಸಲಾಗಿತ್ತು. ಆದರೆ ಆತನಿಗೆ ತ್ರಿಶೂಲ ಸಿಗದ ಹಿನ್ನೆಲೆಯಲ್ಲಿ ಹರಿತವಾದ ಚಾಕು ತಂದಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಲಕನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನ್ಪುರದ ಪೊಲೀಸ್ ಅಧಿಕಾರಿ ವಿಜಯ್ ಧುಲ್ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.