ಹೆಸರಿನ ಹಿನ್ನೆಲೆ, ದೇವಿಯ ರೌದ್ರ ರೂಪದ ಚಿತ್ರಣ
ಪ್ರಜ್ವಲಾ ಶೆಣೈ, ಕಾರ್ಕಳ

ನವರಾತ್ರಿ 9 ರಾತ್ರಿಗಳ ಸಮೂಹ. ಶಕ್ತಿಯ ಆರಾಧನೆಯೇ ಈ ಹಬ್ಬದ ವೈಶಿಷ್ಟ್ಯ. ಹಿಂದೂ ಸಾಂಸ್ಕೃತಿಕ ಪರಂಪರೆಯಲ್ಲಿ ರೋಮಾಂಚಕ ಮತ್ತು ವರ್ಣರಂಜಿತ ಹಬ್ಬವಾದ ನವರಾತ್ರಿಗೆ ಅಗ್ರಸ್ಥಾನ.
ನವರಾತ್ರಿಯ ವಿಶಿಷ್ಟ ಆಚರಣೆ
ನವರಾತ್ರಿ ಆಚರಣೆ ಬಹಳ ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಪ್ರಕೃತಿಯನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು. ನವರಾತ್ರಿಯಲ್ಲಿ ತಾವು ಬೆಳೆದ ಮೊದಲ ಫಲವನ್ನು ದೇವಿಗೆ ಅರ್ಪಿಸುವ ಕ್ರಮವಿದೆ. ತಮ್ಮ ಕೃಷಿ ಭೂಮಿಯಲ್ಲಿ ತಾವು ಬಿತ್ತಿದ ಪ್ರಥಮ ಪೈರನ್ನು ಪೂಜಿಸಿ ದೇವಿಗೆ ಅರ್ಪಿಸಲಾಗುತ್ತದೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ಅದನ್ನು ಮನೆಯ ಪ್ರವೇಶ ದ್ವಾರಕ್ಕೆ ತೋರಣವಾಗಿ ಕಟ್ಟುವ ಸಂಪ್ರದಾಯವಿದೆ.ತೊಟ್ಟಿಲು,ಅಕ್ಕಿ ತುಂಬಿಸುವ ಪರಿಕರ,ಕಪಾಟು,ದೇವರ ಮನೆ,ವಾಹನ, ಬಾವಿ ಇತ್ಯಾದಿಗಳಿಗೂ ಭತ್ತದ ಕದಿರನ್ನು ಕಟ್ಟಿ ಸಮೃದ್ಧಿಯನ್ನು ಪಡೆಯಲು ಪ್ರಾರ್ಥಿಸಲಾಗುತ್ತದೆ. ಮುಂದೆ ಇದು ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡು ಆಚರಣೆಗೆ ಬಂದಿತು.
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ ಅವತಾರ
ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ
ತದಿಗೆಯಂದು ದುರ್ಗೆಯನ್ನು ಚಂದ್ರಘಂಟಾದೇವಿ ರೂಪದಲ್ಲಿ ಪೂಜಿಸಲಾಗುತ್ತದೆ. ದೇವಿಯ ವೈವಾಹಿಕ ರೂಪವಾದ ಈ ಅವತಾರ ಶೌರ್ಯ ಮತ್ತು ಧೈರ್ಯದ ಮೂರ್ತರೂಪ. ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ದುಷ್ಟರಿಗೆ ಸಿಂಹ ಸ್ವಪ್ನಳು.
ಚಂದ್ರಘಂಟಾ ಹೆಸರಿನ ಹಿನ್ನೆಲೆ
ಬ್ರಹ್ಮಚಾರಿಣಿಯು ಹೇಗೆ ಚಂದ್ರಘಂಟಾ ದೇವಿ ಅವತಾರವನ್ನು ಧರಿಸಿದಳು ಎನ್ನುವುದಕ್ಕೆ ಇಲ್ಲೊಂದು ಪೌರಾಣಿಕ ಕಥೆ ಇದೆ.ನಾರದರ ಉಪದೇಶದಂತೆ ಪಾರ್ವತಿಯು ಕಠಿಣ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಳು.ಪಾರ್ವತಿಯ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ವಿವಾಹವಾಗಲು ಒಪ್ಪಿಕೊಂಡನು.
ಸ್ಮಶಾನವಾಸಿ ಶಿವನು ತನ್ನ ಭಯಾನಕ ರೂಪದೊಂದಿಗೆ ಮೆರವಣಿಗೆಯಲ್ಲಿ ಪಾರ್ವತಿಯ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ,ಕೈಯಲ್ಲಿ ತ್ರಿಶೂಲ, ಕೊರಳನ್ನು ಸುತ್ತಿದ ಹಾವುಗಳು, ಗಂಟುಗಂಟಾಗಿರುವ ಜಟೆ, ಆತನೊಂದಿಗೆ ಬಂದಿರುವ ದೆವ್ವಗಳು, ಪಿಶಾಚಿಗಳು, ಗಣಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆ ನೋಡಿ ಪಾರ್ವತಿ ಮೂರ್ಛೆ ಹೋದಳು. ವಿವಾಹಕ್ಕೆಂದು ಸೇರಿದ ಜನತೆ ಶಿವನ ರೂಪ, ಅವನ ಗಣಗಳನ್ನು ನೋಡಿ ಭಯಭೀತಗೊಂಡರು. ಇದನ್ನು ಕಂಡು ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾದ ಚಂದ್ರಘಂಟಾ ದೇವಿಯಾಗಿ ಪರಿವರ್ತನೆಯಾದಳು. ಚಂದ್ರಘಂಟಾ ರೂಪ ತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪ ತಾಳಲು ಪ್ರೇರೇಪಿಸಿದಳು. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪವನ್ನು ತಾಳುತ್ತಾನೆ. ನಂತರ ಶಿವ ಪಾರ್ವತಿಯರ ವಿವಾಹವಾಯಿತು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಹಣೆಯಲ್ಲಿ ಧರಿಸಿರುವವಳು ಎಂದರ್ಥ. ಶಿವನನ್ನು ಮದುವೆಯಾದ ಬಳಿಕ ಪಾರ್ವತಿಯು ತನ್ನ ಹಣೆಯ ಮೇಲೆ ಘಂಟೆಯಾಕಾರದ ಅರ್ಧಚಂದ್ರ ತಿಲಕವನ್ನು ಇಟ್ಟಿರುವಳೆಂದೂ ಹೀಗಾಗಿ ಚಂದ್ರಘಂಟಾ ಎಂದು ಕರೆಯುವರು ಎಂದು ಪ್ರತೀತಿಯಿದೆ.
ದೇವಿಯ ರೌದ್ರ ರೂಪದ ಚಿತ್ರಣ
ಚಂದ್ರಘಂಟಾ ದೇವಿಯು ಹಣೆಯಲ್ಲಿ ಘಂಟೆ ಆಕಾರದ ಚಂದ್ರನನ್ನು ಧರಿಸಿರುವಳು.ಅರ್ಧಚಂದ್ರ ಬೆಳೆಯುವ ಮತ್ತು ಕ್ಷೀಣಿಸುವ ಹಂತಗಳನ್ನು ಪ್ರತಿನಿಧಿಸುತ್ತದೆ.ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯ ಸಮತೋಲನವನ್ನು ಸೂಚಿಸುತ್ತದೆ.ಈಕೆ 10 ಕೈಗಳನ್ನು ಹಾಗೂ ಮೂರು ಕಣ್ಣುಗಳನ್ನು ಹೊಂದಿದ್ದಾಳೆ. ತನ್ನ ಎಂಟು ಕೈಗಳಲ್ಲೂ ತ್ರಿಶೂಲ, ಗದಾ, ಖಡ್ಗ, ಕಮಂಡಲ, ಕಮಲ, ಬಾಣ, ಧನಸ್ಸು, ಜಪಮಾಲೆ ಹಿಡಿದು ದುಷ್ಟ ಸಂಹಾರಕ್ಕಾಗಿ ಸದಾ ಸನ್ನದ್ಧಳಾಗಿರುತ್ತಾಳೆ.ಒಂದು ಕೈಯಲ್ಲಿ ಅಭಯಮುದ್ರೆ ಮತ್ತು ಇನ್ನೊಂದು ಕೈಯಲ್ಲಿ ಜ್ಞಾನಮುದ್ರೆ ಹಿಡಿದು ತನ್ನ ನಂಬಿದ ಭಕ್ತರನ್ನು
ಪೊರೆಯುತ್ತಾಳೆ.ಚಂದ್ರಘಂಟಾ ದೇವಿಯ ಮೂರನೇ ಕಣ್ಣು ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ಯಾವಾಗಲೂ ತೆರೆದೇ ಇರುತ್ತದೆ.ದುಷ್ಟರನ್ನು ಶಿಕ್ಷಿಸಲು ದೇವಿ ಘಂಟಾ ನಾದವನ್ನು ಮಾಡುತ್ತಾಳೆ. ಘಂಟಾ ನಾದವು ನಕಾರಾತ್ಮಕ ಶಕ್ತಿಯನ್ನು ನಿವಾರಣೆ ಮಾಡಿ ಮನೆಯ ಸುತ್ತಮುತ್ತಲೂ ಇರುವ ದುಷ್ಟ ಶಕ್ತಿಯನ್ನು
ಹೊಡೆದೋಡಿಸುತ್ತದೆ. ಹತ್ತು ಆಯುಧಗಳನ್ನು ಕೈಯಲ್ಲಿ ಹಿಡಿದು ದುಷ್ಟಶಕ್ತಿಗಳನ್ನು ಸಂಹರಿಸಿ ತನ್ನ ಭಕ್ತರ ನೆರವಿಗೆ ಕ್ಷಣ ಮಾತ್ರದಲ್ಲಿ ಬರುತ್ತಾಳೆ.ಹೀಗಾಗಿ ಈಕೆಯನ್ನು ಯುದ್ಧದ ದೇವತೆ ಎಂದೂ ಕರೆಯುವರು.
ಉಪಾಸನಾ ವಿಧಾನ ಮತ್ತು ಮಹತ್ವ
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಶೃದ್ಧಾ ಭಕ್ತಿಯಿಂದ ಪೂಜಿಸಲಾಗುತ್ತಿದೆ.
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪೂಜಾ ಪೀಠವನ್ನು ಸ್ವಚ್ಛಗೊಳಿಸಿ ಹೂವು,ರಂಗೋಲಿ ಇತ್ಯಾದಿ ಮಂಗಳಕರ ವಸ್ತುಗಳಿಂದ ಅಲಂಕರಿಸಲಾಗುತ್ತದೆ.ದೇವಿಗೆ ಮಲ್ಲಿಗೆ ಹೂವು ಎಂದರೆ ಬಹಳ ಪ್ರೀತಿ.ಬಿಳಿ ಬಣ್ಣದ ಹೂವುಗಳಿಂದ ಪೂಜಿಸಿ,ಹದಿನಾರು ರೀತಿಯ ಉಪಚಾರ ಮಾಡಿ ,ಹಾಲು,ಹಣ್ಣು,ಸಿಹಿ ಭಕ್ಷ್ಯಗಳ ನೈವೇದ್ಯ ಸಮರ್ಪಿಸಲಾಗುತ್ತದೆ.ಕೆಂಪು ಬಣ್ಣದ ವಸ್ತ್ರದಿಂದ ಸಿಂಗಾರಗೊಳಿಸಿ ಸಿಂಧೂರವನ್ನು ಅರ್ಪಿಸಲಾಗುತ್ತದೆ.
ಸಿಂಧೂರವನ್ನು ಅರ್ಪಿಸುವುದು ಮಂಗಳಕರ ಹಾಗೂ ಇದು ವಿವಾಹಿತ ಸ್ತ್ರೀಯರ ಪತಿ ಭಕ್ತಿಯ ಪ್ರತೀಕವೂ ಹೌದು ಎನ್ನಲಾಗಿದೆ. ದೇವಿಯ ನೆಚ್ಚಿನ ಬಣ್ಣ ಕೆಂಪು.ಇದು ಉತ್ಸಾಹ ಮತ್ತು ಶಕ್ತಿಯ ಮೂಲವಾಗಿದೆ. ಸಿಂಹ/ ಹುಲಿಯ ಮೇಲೆ ಸವಾರಿ ಮಾಡುವ ದೇವಿಯು ನಿರ್ಭಯತೆ ಮತ್ತು ಧೈರ್ಯದ ಪ್ರತೀಕ.
ಚಂದ್ರಘಂಟಾ ದೇವಿಯ ಪೂಜಾ ಮಂತ್ರವನ್ನು ಹೇಳುವುದರ ಮೂಲಕ ದೇವಿಯನ್ನು ಸಂತುಷ್ಟಗೊಳಿಸಲಾಗುತ್ತದೆ.
ಪಿಂಡಜ ಪ್ರವರಾರೂಢ
ಚಂಡಕೋ ಪಾಸ್ತ ಕೈರ್ಯುತಾ
ಪ್ರಸಾದಂ ತನುತೇ ಮಹ್ಯಂ
ಚಂದ್ರ ಘಂಟೇತಿ ವಿಶ್ರುತಾ
ಚಂದ್ರಘಂಟಾ ದೇವಿಯ ಆರಾಧನಾ ಮಂತ್ರ ಪಠಿಸುವುದರಿಂದ ರಕ್ಷಣೆ,ಧೈರ್ಯ,ಸಿಗುತ್ತದೆ ಎನ್ನುವ ನಂಬಿಕೆ ಇದೆ.ತನ್ನ ಭಕ್ತರ ಸಂಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸಿ ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸುವಳು.ಯಾರು ಜೀವನದಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡು ಹತಾಶರಾಗಿರುತ್ತಾರೋ ಅವರು ಚಂದ್ರಘಂಟಾ ದೇವಿಯನ್ನು ಆರಾಧಿಸುವುದರಿಂದ ಮನಸ್ಸಿನ ಭಯವೆಲ್ಲಾ ನಿವಾರಣೆಯಾಗಿ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎನ್ನುವ ನಂಬಿಕೆ ಇದೆ.
ಸರ್ವೇ ಜನಾಃ ಸುಖಿನೋ ಭವಂತು.














