
ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ಧರ್ಮೇಂದ್ರ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದ್ದು ಇದೀಗ ಧರ್ಮೇಂದ್ರ ಪತ್ನಿ ನಟಿ, ಸಂಸದೆ ಹೇಮಾಮಾಲಿನಿ ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
ನಟ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದು ICU ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೆ ಕೆಲ ಮಾಧ್ಯಮಗಳು ಧರ್ಮೇಂದ್ರ ನಿಧನ ಹೊಂದಿದ್ದಾರೆ ಎಂದು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅಭಿಮಾನಿಗಳು ಶೋಕ ಸಂದೇಶ ಹಂಚಿಕೊಂಡಿದ್ದರು. ಆದರೆ ಈ ವಿಷಯ ಧರ್ಮೇಂದ್ರ ಕುಟುಂಬದವರಿಗೆ ತೀವ್ರ ನೋವುಂಟು ಮಾಡಿದ್ದು ವಿಶೇಷವಾಗಿ ನಟಿ, ಸಂಸದೆ ಹೇಮಾಮಾಲಿನಿ ಅವರಂತೂ ಮಾಧ್ಯಮಗಳು ಹಾಗೂ ಸುಳ್ಳು ಸುದ್ದಿ ಹರಡುತ್ತಿರುವವರ ಮೇಲೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೀಟ್ :
‘ಈ ರೀತಿ ಆಗುತ್ತಿರುವುದು ಕ್ಷಮೆಗೆ ಅರ್ಹವಾದುದಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಗೆ ಸರಿಯಾದ ಗೌರವವನ್ನು ನೀಡಿ’ ಎಂದು ಹೇಮಾಮಾಲಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.





