
ಭಾರತೀಯ ಗುರು ಪರಂಪರೆಯಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರವಾದದ್ದು.ಅವರ ಜನನ 8 ನೇ ಶತಮಾನದಲ್ಲಿ ಆಗಿರಬಹುದೆಂದು ಅಂದಾಜಿಸಲಾಗಿದೆ.ಭಾರತೀಯ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಕೇರಳದ ಕಾಲಟಿ ಎಂಬಲ್ಲಿ ಶಿವಗುರು ಹಾಗೂ ಆರ್ಯಾಂಬೆ ದಂಪತಿಗಳ ಪುತ್ರರಾಗಿ ಜನಿಸಿದವರು ಜಗದ್ಗುರು ಶಂಕರಾಚಾರ್ಯರು.ಶಂಕರಾಚಾರ್ಯರ ಜನುಮ ದಿನವನ್ನು ದೇಶ ವಿದೇಶಗಳಲ್ಲಿ ನೆಲೆಸಿರುವ ಹಿಂದೂ ಭಕ್ತರು ಕೂಡ ಆದರದಿಂದ ಆಚರಿಸುವರು.ಈ ದಿನ ಅನೇಕ ಶುಭ ಕಾರ್ಯಗಳು ನಡೆಯುತ್ತವೆ.ಅದರಲ್ಲೂ ವಿಶೇಷವಾಗಿ ಸಾಮೂಹಿಕ ಉಪನಯನ ಈ ದಿನ ನಡೆಯುತ್ತದೆ.
ಸನಾತನ ಧರ್ಮದ ಪುನರುಜ್ಜೀವನಅದು 8 ನೇ ಶತಮಾನದ ಕಾಲಘಟ್ಟ. ಭಾರತ ಹಲವು ಧರ್ಮಗಳಿಂದ ಹರಿದು ಹಂಚಿ ಹೋದ ಕಾಲ.ವಿದೇಶಿಯರ ನಿರ್ದಾಕ್ಷಿಣ್ಯ ದಾಳಿಯಿಂದ ಅದೆಷ್ಟೋ ಸ್ಮಾರಕಗಳು,ಕಟ್ಟಡಗಳು,ವಾಸ್ತುಶಿಲ್ಪಗಳು ನಾಶವಾದರೂ ಕೂಡ ಇಂದಿಗೂ ಭಾರತೀಯ ಕಲೆ,ಸಂಸ್ಕೃತಿ,ಧರ್ಮ ಉಳಿದಿದೆ ಎಂದರೆ ಅದಕ್ಕೆ ಕಾರಣ ಭಾರತೀಯ ಋಷಿ,ಮುನಿಗಳ ಸಹಸ್ರಾರು ವರ್ಷಗಳ ತಪಸ್ಸಿನ ಫಲ.ಗ್ರೀಕ್,ಪರ್ಷಿಯನ್,ಅರೇಬಿಯನ್ ಪೋರ್ಚುಗೀಸ್,ಡಚ್,ಇಂಗ್ಲಿಷ್,ಮೊಗಲ್ ಮುಂತಾದವರ ದಾಳಿಯಿಂದ ನಮ್ಮ ದೇಶದ ಸಂಪತ್ತು ಖಾಲಿಯಾದರೂ ಕೂಡ ನಮ್ಮ ದೇಶ ಇನ್ನಷ್ಟು ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರೆ ಅದು ಸಾಧು ಸಂತರ ತಪೋಬಲ.
ಭಾರತೀಯ ಸಂಸ್ಕೃತಿ,ಸನಾತನ ಧರ್ಮ ಅಳಿವಿನಂಚಿಗೆ ಸಾಗುತ್ತಿರುವಾಗ ಧರ್ಮ ರಕ್ಷಣೆಯ ನೆಲೆಯಲ್ಲಿ ಉದಯಿಸಿದ ಜ್ಯೋತಿ ಜಗದ್ಗುರು ಶಂಕರಾಚಾರ್ಯರು.ನಮ್ಮ ದೇಶದ ಸನಾತನ ಧರ್ಮದ ಬಗ್ಗೆ ಹಲವು ಸಂತರು ,ಜ್ಞಾನಿಗಳು ಧರ್ಮ ಪ್ರಸಾರ ಮಾಡಿದ್ದರು.ಆದರೆ ಸನಾತನ ಧರ್ಮ ರಕ್ಷಣೆಯ ಕಾರ್ಯದಲ್ಲಿ ಆದಿ ಶಂಕರಾಚಾರ್ಯರು ಅಗ್ರಸ್ಥಾನದಲ್ಲಿ ಕಂಡು ಬರುತ್ತಾರೆ.ಅವರಿಗಿದ್ದ ಹರಿತವಾದ ಜ್ಞಾನ ,ತೀಕ್ಷ್ಣವಾದ ಬುದ್ಧಿಶಕ್ತಿ ಅವರನ್ನು ಇತಿಹಾಸ ಇರುವವರೆಗೆ ಸ್ಮರಿಸುವಂತೆ ಮಾಡುವುದು.
ಭಾರತ ಕಂಡ ಮಹಾನ್ ಜ್ಯೋತಿ
ಪರಿತ್ರಾಣಾಯ ಸಾಧುನಾಂ
ವಿನಾಶಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ ಎನ್ನುವ ಮಾತಿನಂತೆ ಯಾವಾಗ ಜಗತ್ತಿನಲ್ಲಿ ಅಧರ್ಮ ತಾಂಡವ ವಾಡುವುದೋ,ಆಗ ಧರ್ಮ ಸಂಸ್ಥಾಪನೆಗೆ ಮಹಾನ್ ಪುರುಷ ರೊಬ್ಬರು ಜನ್ಮ ತಾಳುವರು. ಇದೇ ರೀತಿ ಸನಾತನ ಸಂಸ್ಕೃತಿಯ ರಕ್ಷಣೆಗಾಗಿಯೇ ಜನಿಸಿದ ಮಹಾ ಚೈತನ್ಯ ಆದಿ ಶಂಕರಾಚಾರ್ಯರು.
ಬಾಲ್ಯ ಮತ್ತು ಸಾಧನೆ
ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದು ಕೊಂಡರು.ಮುಂದೆ ಶಂಕರರ ಜವಾಬ್ದಾರಿ ತಾಯಿ ಆರ್ಯಾಂಬೆಯ ಹೆಗಲಿಗೆ ಬಿತ್ತು.ಇವರು ಹುಟ್ಟುವಾಗಲೇ ಜ್ಞಾನವನ್ನು ದೈವದತ್ತವಾಗಿ ಪಡೆದಿದ್ದರು ಎಂದರೆ ಅತ್ಯಾಶ್ಚರ್ಯವಾಗುವುದು.ತನ್ನ 3ನೇ ವಯಸ್ಸಿನಲ್ಲಿ ಅಕ್ಷರಾಭ್ಯಾಸ ಆರಂಭಿಸಿದರು.ನಂತರ ಉಪನಯನ ಸಂಸ್ಕಾರವನ್ನು ಪಡೆದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ವೇದಾಭ್ಯಾಸ ಮಾಡಿದರು.
ಶಂಕರರ ಬಗ್ಗೆ ಒಂದು ಶ್ಲೋಕ ಹೀಗೆ ಹೇಳುತ್ತದೆ.
ಅಷ್ಟ ವರ್ಷೋ್ ಚತುರ್ವೇದಿ
ದ್ವಾದಶೇ ಸರ್ವ ಶಾಸ್ತ್ರವಿತ್
ಷೋಡಶೇ ಕೃತವಾನ್ ಭಾಷ್ಯಂ
ದ್ವಾತ್ರಿಂಶೇ ಮುನಿ ರಭ್ಯಗಾತ್
ಅಂದರೆ ಶಂಕರಾಚಾರ್ಯರು 8 ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತರು,ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದರು ಮತ್ತು ಮೂವತ್ತೆರಡನೇ ವಯಸ್ಸಿನಲ್ಲಿ ಕಾಲವಾದರು.ಜೀವನದಲ್ಲಿ ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾರೆ ಎನ್ನುವುದಕ್ಕಿಂತ ಅವರು ಬದುಕಿದ್ದಾಗ ಏನು ಸಾಧನೆ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ. ಶಂಕರಾಚಾರ್ಯರು ಬದುಕಿದ್ದು ಕೇವಲ 32 ವರ್ಷ ಮಾತ್ರ.ಆದರೆ ಇವರ ಸಾಧನೆ ಅಪರಿಮಿತ.
ಅಧ್ಯಾತ್ಮದತ್ತ ಒಲವು
ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ
ವೇದಾಭ್ಯಾಸ ಮಾಡಿದರು. 8 ನೇ ವಯಸ್ಸಿನಲ್ಲಿ ವೇದಗಳನ್ನು ಕಲಿತು,12 ನೇ ವಯಸ್ಸಿನಲ್ಲಿ ಎಲ್ಲಾ ಶಾಸ್ತ್ರಗಳಲ್ಲಿ ಪ್ರವೀಣರಾಗಿ,15 ನೇ ವಯಸ್ಸಿನಲ್ಲಿ ಭಗವದ್ಗೀತೆ, ಬ್ರಹ್ಮಸೂತ್ರಗಳನ್ನು ,ಉಪನಿಷತ್ತುಗಳನ್ನು ಕಲಿತ ಮಹಾನ್ ಮೇಧಾವಿ.ಶಂಕರರಿಗೆ ಲೌಕಿಕ ಪ್ರಪಂಚದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ.ಅಧ್ಯಾತ್ಮದತ್ತ ಮನಸ್ಸು ವಾಲಿದಾಗ ತಾಯಿ ಆರ್ಯಾಂಬೆ ಚಿಂತಿತರಾದರು.ಒಬ್ಬನೇ ಮಗ ಸನ್ಯಾಸತ್ವ ಸ್ವೀಕರಿಸುವುದು ಆಕೆಗೆ ನುಂಗಲಾರದ ತುತ್ತಾಗಿತ್ತು.ಆದರೆ ಶಂಕರರ ಮನಸ್ಸು ಯಾವುದಕ್ಕೂ ಕರಗಲಿಲ್ಲ.ಕೊನೆಗೆ ತನ್ನ ತಾಯಿಯ ಕೊನೆಯ ದಿನಗಳಲ್ಲಿ ಜೊತೆಗಿರುವೆ ನೆಂಬ ಮಾತು ನೀಡಿ ಅಲ್ಲಿಂದ ಹೊರಟರು.ಮುಂದೆ ಮಾತೆಯ ಅಂತಿಮ ಕ್ಷಣಗಳಲ್ಲಿ ಜೊತೆಗಿದ್ದು ಅಂತಿಮ ವಿಧಿ ವಿಧಾನಗಳನ್ನು ನಡೆಸಿ ಕೊಟ್ಟ ಮಾತಿನಂತೆ ನಡೆದು ಕೊಂಡರು.
ವೇದವ್ಯಾಸರ ಅನುಗ್ರಹ
ಶಂಕರಾಚಾರ್ಯರು 16 ನೇ ವಯಸ್ಸಿನಲ್ಲಿ ಇದ್ದಾಗ ವೇದವ್ಯಾಸ ಮಹರ್ಷಿಗಳ ಅನುಗ್ರಹ ಪಡೆದರು.
ಅದೊಂದು ದಿನ ವೃದ್ಧರೊಬ್ಬರು ಶಂಕರಾಚಾರ್ಯರು ರಚಿಸಿದ ಬ್ರಹ್ಮ ಸೂತ್ರದ ಬಗ್ಗೆ ವಿಮರ್ಶಾತ್ಮಕ ಚರ್ಚೆ ಮಾಡುತ್ತಿದ್ದರು.ಅದನ್ನು ಕೇಳಿ ಶಂಕರರು ವಾದವಿವಾದದಲ್ಲಿ ತೊಡಗಿಕೊಂಡರು.ಚರ್ಚೆ ದಿನಗಟ್ಟಲೆ ಸಾಗುತ್ತಿತ್ತು.ಕೊನೆಗೆ ಶಂಕರಾಚಾರ್ಯರಿಗೆ ತಾನು ವಾದ ಮಾಡುತ್ತಿರುವುದು ವೇದವ್ಯಾಸ ಮಹರ್ಷಿಗಳ ಜೊತೆ ಎಂದು ಅರಿವಾಯಿತು.ತಕ್ಷಣ ತನ್ನಿಂದಾದ ತಪ್ಪು ಅರಿತು ವ್ಯಾಸರ ಕಾಲಿಗೆ ಬಿದ್ದು ಕ್ಷಮೆ ಕೇಳಿದರು.ಆಗ ವ್ಯಾಸ ಮಹರ್ಷಿಗಳು ಮತ್ತೆ 16 ವರ್ಷ ಆಯಸ್ಸನ್ನು ಕರುಣಿಸಿ “ನೀನು ನಿನ್ನಲ್ಲಿರುವ ಜ್ಞಾನವನ್ನು ಇಡೀ ದೇಶಕ್ಕೆ ಪಸರಿಸು.ನೀನು ರಚಿಸಿದ ಬ್ರಹ್ಮ ಸೂತ್ರಕ್ಕೆ ನನ್ನ ಸಂಪೂರ್ಣ ಸಹಮತ ಇದೆ.”ಎಂದು ಆಶೀರ್ವದಿಸಿದರು.
ಸನ್ಯಾಸತ್ವ ಸ್ವೀಕಾರ
ಶಂಕರರು ಗುರುಗಳ ಹುಡುಕಾಟದಲ್ಲಿ ತೊಡಗಿರುವಾಗ ನರ್ಮದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದರು.ತನ್ನನ್ನು ಶಿಷ್ಯರನ್ನಾಗಿ ಸ್ವೀಕರಿಸಬೇಕೆಂದು ದಂಬಾಲು ಬಿದ್ದರು.ವಿವಿಧ ಪರೀಕ್ಷೆಗಳನ್ನು ,ಸವಾಲುಗಳನ್ನು ಎದುರಿಸಿ ಗುರುಗಳ ಮನ ಗೆದ್ದು ಅವರ ದೀಕ್ಷೆಯನ್ನು ಪಡೆದರು.ಯೋಗ, ವೇದ,ಉಪನಿಷತ್ತುಗಳನ್ನು ಕಲಿತು ಅಲ್ಲಿಂದ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.ಅವರಿಗೂ ಜ್ಞಾನದ ಧಾರೆ ಎರೆದರು.ಶಂಕರರು ದೇಶದ ಮೂಲೆ ಮೂಲೆ ಸಂಚಾರ ಮಾಡಿ ವಿಚಾರವಾದಿಗಳನ್ನು,ಮುಖಂಡರನ್ನು ಭೇಟಿಯಾಗಿ ಅವರನ್ನು ಅಧ್ಯಾತ್ಮಿಕ ವಾದದಲ್ಲಿ ಸೋಲಿಸಿದರು. ಇಡೀ ದೇಶದಲ್ಲಿ ಸನಾತನ ಧರ್ಮ ಸಂಸ್ಕೃತಿಯನ್ನು ಪ್ರಸಾರ ಮಾಡಿದರು.
ಅದ್ವೈತ ಸಿದ್ಧಾಂತದ ಹರಿಕಾರ
ಶಂಕರಾಚಾರ್ಯರು ಆತ್ಮ ಮತ್ತು ಪರಮಾತ್ಮ ಎರಡೂ ಬೇರೆ ಬೇರೆ ಅಲ್ಲ, ಅವೆರಡೂ ಒಂದೇ, ಆತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮ ,ಇದನ್ನೇ ಅದ್ವೈತ ಸಿದ್ಧಾಂತ ಎಂದು ಕರೆದರು.ಸಂಸ್ಕೃತದಲ್ಲಿ ದ್ವಿ ಎಂದರೆ ಎರಡು.ಅಂದರೆ ಅ + ದ್ವೈತ ಎಂದರೆ ಎರಡಲ್ಲದ್ದು ಎಂಬುವುದಾಗಿದೆ. ತಾವು ಕಂಡುಕೊಂಡ ಅದ್ವೈತ ಚಿಂತನೆಗಳ ಮೂಲಕ ಲೋಕವನ್ನೇ ಬೆಳಗಿದರು.ತಮ್ಮ ಚಿಂತನೆಗಳನ್ನು ಪ್ರಸಾರ ಮಾಡಲು ದೇಶದ 4 ಮೂಲೆಗಳಲ್ಲಿ 4 ಪೀಠ ಗಳನ್ನು ಸ್ಥಾಪಿಸಿದರು.ಉತ್ತರದಲ್ಲಿ ಬದರಿ ಪೀಠ,ದಕ್ಷಿಣದಲ್ಲಿ ಶೃಂಗೇರಿ ಪೀಠ,ಪೂರ್ವದಲ್ಲಿ ಪುರಿ ಪೀಠ, ಪಶ್ಚಿಮದಲ್ಲಿ ದ್ವಾರಕ ಪೀಠ ಸ್ಥಾಪಿಸಿ ಧರ್ಮ ಪ್ರಸಾರ ಮಾಡಿದರು.ಈ ನಾಲ್ಕೂ ಪೀಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ. ಅವರು ಹಾಕಿ ಕೊಟ್ಟ ಸಿದ್ಧಾಂತ,ತತ್ವಗಳು ಇಂದಿಗೂ ಜೀವಂತವಾಗಿದೆ.
ಭಾರತ ಕಂಡ ಅನನ್ಯ ಜ್ಯೋತಿ
ಶಂಕರಾಚಾರ್ಯರು ತಮ್ಮ ಅಂತಿಮ ದಿನಗಳಲ್ಲಿ ಹಿಮಾಲಯಕ್ಕೆ ತೆರಳಿ ಅಲ್ಲಿಯ ಕೇದಾರ ದೇವಾಲಯದ ಹತ್ತಿರ ತಮ್ಮ ದೇಹದಿಂದ ಮುಕ್ತಿ ಪಡೆಯುತ್ತಾರೆ.ಇಂದಿಗೂ ಅಲ್ಲಿ ಶಂಕರಾಚಾರ್ಯರ ಸಮಾಧಿ ಮತ್ತು ಶಿಲಾ ಪ್ರತಿಮೆಯನ್ನು ಕಾಣಬಹುದು.ಭರತ ಭೂಮಿ ಕಂಡ ಅಪರೂಪದ ದಾರ್ಶನಿಕ ಆದಿ ಶಂಕರಾಚಾರ್ಯರು ಕೇವಲ 32 ವರ್ಷ ಬದುಕಿದರು. ಆದರೆ ಇವರ ಸಾಧನೆ 100 ವರ್ಷಕ್ಕೂ ಮೀರಿದ್ದು.ಇವರು ಜಗತ್ತಿಗೆ ಬಡಿದ ಅಜ್ಞಾನದ ಕತ್ತಲೆಯನ್ನು ಓಡಿಸುವ
ಮಹಾಪುರುಷರಷ್ಟೇ ಅಲ್ಲ ,ಧರ್ಮ ಜಾಗೃತಿಯ ಬಡಿದೆಬ್ಬಿಸಿದ ಯುಗಪುರುಷ.ಇಂತಹ ಮಹಾನ್ ಸಾಧಕ ಅವತಾರವೆತ್ತಿ ಮತ್ತೆ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯದೊಂದಿಗೆ ಸರ್ವರಿಗೂ ಶಂಕರಾಚಾರ್ಯ ಜಯಂತಿಯ ಶುಭ ಕಾಮನೆಗಳು.