
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೇಶದ ಸಾಲ ಹೆಚ್ಚಾಗಲು ನರೇಂದ್ರ ಮೋದಿಜಿ ಕಾರಣ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಮಾನ ಮಾರ್ಯಾದೆ ಏನೂ ಇಲ್ಲ. ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿದವರು ಯಾರು? ಗ್ಯಾಸ್ ಬೆಲೆ ಏರಿಸಿದವರು ಯಾರು? ಇದಕ್ಕೆಲ್ಲ ಕಾರಣ ಬಿಜೆಪಿಯವರು. ಮೋದಿ ಸರ್ಕಾರ ಇದೆಕ್ಕೆಲ್ಲಾ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಹಾಲಿನ ದರ ಏರಿಕೆ ಮಾಡಿರೋದು ರೈತರಿಗೆ ವರ್ಗಾವಣೆ ಮಾಡಲು. ಅದನ್ನ ರೈತರಿಗೆ ಕೊಡಬೇಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ರೈತ ವಿರೋಧಿಗಳಾ? ಗ್ಯಾಸ್ ಬೆಲೆ 50 ರೂ. ಹೆಚ್ಚು ಮಾಡಿದ್ದಾರೆ. ಕಚ್ಚಾತೈಲ ಬೆಲೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್‌ಗೆ 120 ಡಾಲರ್ ಇತ್ತು. ಈಗ 65 ಡಾಲರ್ ಆಗಿದೆ. ಈಗ ಯಾಕೆ ಹೆಚ್ಚು ಮಾಡಿದ್ದಾರೆ? ಬಿಜೆಪಿಯವರಿಗೆ ನೈತಿಕತೆ ಇಲ್ಲ, ಬೆಲೆ ಏರಿಕೆ ಆಗಿರೋದು ಅವರ ಕಾಲದಲ್ಲಿ. ಕೇಂದ್ರ ಸರ್ಕಾರದ ತಪ್ಪು ನೀತಿಯಿಂದ ಬೆಲೆ ಏರಿಕೆ ಆಗಿದೆ.
ನಾವು ಹಿಂದಿನ ವರ್ಷಕ್ಕಿಂತ ಈ ವರ್ಷ 38ಸಾವಿರ ಕೋಟಿ ರೂ. ಹೆಚ್ಚಿನ ಬಜೆಟ್ ಮಂಡನೆ ಮಾಡಿದ್ದೇವೆ. ಆರ್ಥಿಕ ದಿವಾಳಿ ಆಗಿದ್ರೇ ಇದು ಸಾಧ್ಯ ಆಗುತ್ತಿತ್ತಾ? ಮೋದಿಯವರು ಬಂದಾಗ 53 ಲಕ್ಷದ 11 ಸಾವಿರ ಕೋಟಿ ರೂ. ಸಾಲ ಇತ್ತು. ಹತ್ತು ವರ್ಷದಲ್ಲಿ 200 ಲಕ್ಷ ಕೋಟಿ ರೂ. ಸಾಲ ಆಗಿದೆ. ದೇಶದ ಮೇಲೆ ಸಾಲ ಜಾಸ್ತಿ ಆಗಲು ಕಾರಣ ಮೋದಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





















