
ಕಾರ್ಕಳ: ಪ್ರಕೃತಿಯ ರಮಣೀಯ ತಾಣದಲ್ಲಿ ಜುಳು ಜುಳು ನಿನಾದಗೈಯುತ್ತಾ ಸಾಗುವ ತೊರೆಯ ಇಕ್ಕೆಲಗಳಲ್ಲಿ ಪ್ರತಿ ವರ್ಷ ರಂಗೇರುತಿದ್ದ ಚಾವಡಿ ಸಂಭ್ರಮಕ್ಕೆ ಈ ಬಾರಿ ರಂಗವೇರುವ ಸುಯೋಗ. ಕ್ಷಣ, ದಿನ, ಮಾಸ, ಸಂವತ್ಸರಗಳುರುಳಿ ಚಾವಡಿಗೀಗ ಹತ್ತರ ಹರೆಯದ ಸಂಬ್ರಮ. ಈ ಸಂಭ್ರಮವನ್ನು ವೇದಿಕೆಯೇರಿಸುವ ಚಾವಡಿ ಬಂಧುಗಳ ಒತ್ತಾಸೆಗೆ ಪುಷ್ಠಿ ನೀಡುವಂತೆ ಈ ಬಾರಿಯ ಚಾವಡಿ ಸಂಬ್ರಮ ಕಾರ್ಕಳ ಕುಲಾಲ ಸಂಘದ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಚಾವಡಿಯ ಪ್ರಧಾನ ನಿರ್ವಾಹಕರಾದ ಸಂತೋಷ್ ಕುಲಾಲ್ ಪದವು ವಹಿಸಿಕೊಂಡಿದ್ದರು. ಪ್ರತಿ ಮನೆಯಲ್ಲೂ ಒಂದೊಂದು ಕಾರ್ಯಕ್ರಮ ಇದ್ದಂತೆ ಊರಿನಲ್ಲೆಡೆ ಮದುವೆ ಮುಂಜಿ ಇನ್ನಿತರ ಸಭೆ ಸಮಾರಂಭ ಇದ್ದರೂ ಚಾವಡಿ ಬಂಧುಗಳ ಉಪಸ್ಥಿತಿ ಮೂರಂಕೆಯನ್ನು ದಾಟಿದ್ದು ಬಲು ವಿಶೇಷವಾಗಿತ್ತು.
ಹತ್ತನೇ ವರ್ಷದ ಚಾವಡಿ ಸಂಭ್ರಮ ಜನ ಮಾನಸದಲ್ಲಿ ಚಿರಸ್ಥಾಯಿಯಾಗುವಂತೆ ಚಾವಡಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಿರೀಕ್ಷೆ ಮತ್ತು ಅಪೇಕ್ಷೆ ಎರಡರಿಂದಲೂ ಪರಿತ್ಯಕ್ತವಾದ ಸಮಾಜದ ಅಮೂಲ್ಯ ಆಸ್ತಿ ಎಂದೇ ಬಿಂಬಿತವಾಗಿರುವ ಮೂವರು ಸಾಮಾಜಿಕ ಕಾರ್ಯಕರ್ತರನ್ನು ಕುಲಾಲ ಚಾವಡಿ ಪುರಸ್ಕಾರ ನೀಡಿ ಗೌರವಿಸಲಾಯಿತು. “ಒಂದೇ ಜಾತಿ ಮಾನವ ಜಾತಿ” ಎಂಬ ನೆಲೆಗಟ್ಟಿನಲ್ಲಿ ವಿಭಿನ್ನ ಕಾರ್ಯಕ್ಷೇತ್ರದಲ್ಲಿ ಸಮಾಜದ ನಿರ್ಗತಿಕ, ಅಸಹಾಯಕರ ಏಳಿಗೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ರವಿ ಕಟಪಾಡಿ, ರೋಷನ್ ಬೆಳ್ಮಣ್, ಹರ್ಷದ್ ಕೊಪ್ಪ ಇವರನ್ನು ಚಾವಡಿ ಸಂಬ್ರಮ ವೇದಿಕೆಯಲ್ಲಿ ಗೌರವಿಸುವ ಮೂಲಕ ಚಾವಡಿ ಸಂಬ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.
ಈ ಸಂದರ್ಭದಲ್ಲಿ ಅಜೆಕಾರು ಕೈಕಂಬ ನಿವಾಸಿ ಶ್ರೀ ಮತಿ ಸಂಧ್ಯಾರ ಅನಾರೋಗ್ಯದ ಚಿಕಿತ್ಸೆಗೆ ಚಾವಡಿ ಬಂಧುಗಳ ಮುಖಾಂತರ ಕ್ರೋಢೀಕರಿಸಿದ ₹78000/-ವನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. ಮೂತ್ರ ಕೋಶ ಮತ್ತು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಮಾಳ ಮುಳ್ಳೂರಿನ ಪ್ರಸಾದ್ ಕುಲಾಲರಿಗೆ ಕುಲಾಲ ಚಾವಡಿಯ ಸಹೃದಯಿ ದಾನಿಗಳ ಮುಖಾಂತರ ಕಳೆದ ಹನ್ನೆರಡು ತಿಂಗಳಿನಿಂದ ದಿನಸಿ ನೀಡಲಾಗುತ್ತಿದ್ದು ಹದಿಮೂರನೇ ತಿಂಗಳ ದಿನಸಿಯ ಮೊತ್ತವನ್ನು ಪ್ರಸಾದ್ ರವರ ತಾಯಿಗೆ ಈ ತಿಂಗಳ ದಿನಸಿಯ ದಾನಿ ಕೃಷ್ಣ ಕುಲಾಲ್ ಅಜೆಕಾರು ಅವರು ನೀಡಿದರು.
ಕಳೆದ ಹತ್ತು ವರ್ಷಗಳಿಂದ ಕುಲಾಲ ಚಾವಡಿಯನ್ನು ಯಶಸ್ವಿ ಸಮುದಾಯ ಪರ ಸಂಘಟನೆಯಾಗಿ ಬೆಳೆಸುವಲ್ಲಿ ಸಾವಿರಕ್ಕೂ ಹತ್ತಿರ ಚಾವಡಿ ಬಂಧುಗಳ ಸಹಕಾರ ಇದ್ದರೂ ಧನ ಸಂಗ್ರಹ ಮತ್ತು ಸಂತ್ರಸ್ತರಿಗೆ ಹಸ್ತಾಂತರದ ನಡುವಿನ ವಿಭಿನ್ನ ಕಾರ್ಯಗಳ ಜವಾಬ್ದಾರಿ ಹೊತ್ತಿರುವ ನಿರ್ವಾಹಕರಾದ ಸಂತೋಷ್ ಕುಲಾಲ್ ಪದವು ಮತ್ತು ಸಹ ನಿರ್ವಾಹಕರಾದ ಸುಧೀರ್ ಬಂಗೇರ, ಸತೀಶ್ ಕಜ್ಜೋಡಿ, ಹೃದಯ್ ಕುಲಾಲ್, ಸಂದೇಶ್ ಕುಲಾಲ್ ಮತ್ತು ಮುಂಬೈ ವಿಭಾಗದ ಪ್ರಮುಖರಾದ ಜಗದೀಶ್ ಕಲ್ಲೋಡಿ, ಶಾಲಿನಿ ಕುಲಾಲ್, ದೇವಪ್ಪ ಕುಲಾಲ್ ನಿಟ್ಟೆ, ಚಂದ್ರಶೇಖರ್ ಮಡಿಕೇರಿ, ಕುಶ ಆರ್ ಮೂಲ್ಯ,ಶಂಕರ್ ಕುಲಾಲ್ ಸಾಣೂರು ,ವಿಶ್ವನಾಥ್ ಕುಲಾಲ್ ನಿಟ್ಟೆ, ವಿಜೇಶ್ ಕುಲಾಲ್ ಮುಂತಾದವರನ್ನು ಗೌರವಿಸಲಾಯಿತು.
ಕು! ಸನ್ನಿಧಿ ಕುಲಾಲ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ವೇದಿಕೆಯಲ್ಲಿ ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಬೇಳಂಜೆ, ಚಾವಡಿಯ ಪ್ರಧಾನ ಸಲಹೆಗಾರರಾದ ಶ್ರೀಮತಿ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಧವಳ ಕೀರ್ತಿ ಮೂಡುಬಿದಿರೆ, ಹೇಮಂತ್ ಕುಲಾಲ್ ಕಿನ್ನಿಗೋಳಿ, ರಮೇಶ್ ಕುಲಾಲ್ ವಗ್ಗ, ಜಗದೀಶ್ ಕಲ್ಲೋಡಿ,ಮುಂಬೈ ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ, ವಿಠ್ಠಲ್ ಕುಲಾಲ್ ಬೇಲಾಡಿ ಉಪಸ್ಥಿತರಿದ್ದರು.
ಸತೀಶ್ ಕಜ್ಜೋಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು, ಸುಧೀರ್ ಬಂಗೇರ ಪ್ರಾಸ್ತಾವಿಕದಲ್ಲಿ ಕುಲಾಲ ಚಾವಡಿಯ ಭೂತಕಾಲ ಮತ್ತು ವರ್ತಮಾನದ ಏರಿಳಿತ ಮತ್ತು ಭವಿಷ್ಯದ ಧೃಡ ಹೆಜ್ಜೆಯ ಸ್ಪಷ್ಟ ಚಿತ್ರಣ ನೀಡಿದರೆ ಹೃದಯ್ ಕುಲಾಲ್ ರವರು ಚಾವಡಿಯ ದಶಕದ ಶ್ರಮ, ಪರಿಶ್ರಮವನ್ನು ವರದಿ ರೂಪದಲ್ಲಿ ಸಭಾಸದರ ಮುಂದಿಟ್ಟರು. ಸುರೇಶ್ ಮೂಲ್ಯ ದನ್ಯವಾದಗೈದರೆ ಕರಾವಳಿಯ ಯುವ ಕಥೆಗಾರ ಖ್ಯಾತ ನಿರೂಪಕ ಮಂಜುನಾಥ ಹಿಲಿಯಾಣ ತಮ್ಮ ಅದ್ಭುತ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತುಂಬಿದರು.