
ಹೊಸದಿಲ್ಲಿ: ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟವು ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬುಧವಾರ ನಡೆದ ಐಎನ್‌ಡಿಐಎ ಒಕ್ಕೂಟದ ನಾಯಕರ ಸಭೆಯಲ್ಲಿ ಚರ್ಚಿಸಿ ಕಿಂಗ್‌ಮೇಕರ್ ಗಳಾದ ಟಿಡಿಪಿ ಮತ್ತು ಜೆಡಿಯು ವರಿಷ್ಠರು ಎನ್‌ಡಿಎಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರ ರಚಿಸುವ ಪ್ರಯತ್ನವನ್ನು ಕೈಬಿಟ್ಟಿದ್ದು, ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧಾರ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ ಎರಡು ತಾಸಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ “ಬಿಜೆಪಿ ಸರಕಾರ ಆಡಳಿತ ನಡೆಸಬಾರದು ಎಂಬ ಜನರ ಆಶಯವನ್ನು ಈಡೇರಿಸಲು ಐಎನ್‌ಡಿಐಎ ಒಕ್ಕೂಟವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದರು. ಇದೇ ವೇಳೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾದ ಹೇಳಿಕೆಯನ್ನು ಓದಿ ಹೇಳಿದ ಮಲ್ಲಿಕಾರ್ಜುನ ಖರ್ಗೆ ಐಎನ್‌ಡಿಐಎ ಒಕ್ಕೂಟವನ್ನು ಯಾವುದೇ ಪಕ್ಷ ಯಾವುದೇ ಸಮಯದಲ್ಲಿ ಬೇಕಿದ್ದರೂ ಬಂದು ಸೇರಿಕೊಳ್ಳಬಹುದು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ದಬ್ಟಾಳಿಕೆ ಆಡಳಿತದ ವಿರುದ್ಧ ವಿಪಕ್ಷ ನಾಯಕರು ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ನಾವು ಜತೆಯಾಗಿ ಕೆಲಸ ಮಾಡಲು ನಿರ್ಧರಿಸಿದ್ದು, ಚುನಾವಣೆ ಯಲ್ಲಿ ಜನರಿಗೆ ನೀಡಲಾದ ಭರವಸೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.