
ಬೆಂಗಳೂರು: ವಿಧಾನಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆಯ ದೃಷ್ಟಿಯಿಂದ ಕರ್ನಾಟಕದಾದ್ಯಂತ ಜೂನ್ 1ರಿಂದ ಐದು ದಿನಗಳ ಕಾಲ ಮದ್ಯ ಮಾರಾಟ ಭಾಗಶಃ ಬಂದ್ ಆಗಲಿದೆ.
ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಲಿದ್ದು ಜೂನ್ 1 ಮತ್ತು ಜೂನ್ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.
ಮಾರತಹಳ್ಳಿಯಲ್ಲಿರುವ ದೊಡ್ಡ ರೆಸ್ಟೋಬಾರ್‌ಗಳ ಕಾರ್ಯಾಚರಣೆಯ ಮುಖ್ಯಸ್ಥರೊಬ್ಬರು ಈ ಕುರಿತು ಮಾತನಾಡಿದ ನಾವು ಕಾರ್ಪೊರೇಟ್ ಪಾರ್ಟಿಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ಶನಿವಾರ ಸಂಜೆಯೇ ಮದ್ಯ ಮಾರಾಟದ ಮೇಲಿನ ನಿಷೇಧವು ಪ್ರಾರಂಭವಾಗುತ್ತದೆ. ಇದರಿಂದ ದಿನಕ್ಕೆ 30 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಲಿದೆ. ನಾವು ಅತಿಹೆಚ್ಚು ತೆರಿಗೆ ಪಾವತಿದಾರರಾಗಿದ್ದೇವೆ. ಆದರೂ ಮದ್ಯ ಮಾರಾಟಕ್ಕೆ ಪದೇಪದೆ ಅಡ್ಡಿಯುಂಟು ಮಾಡಲಾಗುತ್ತಿದೆ. ಮದ್ಯ ಮಾರಾಟ ನಿಷೇಧದಿಂದ ನಮಗೆ ಭಾರಿ ಹಿನ್ನಡೆಯಾಗಲಿದೆ. ವಾರಾಂತ್ಯದಲ್ಲಿ ಶೇ 60 ವರೆಗೆ ಮದ್ಯ ಮಾರಾಟವಾಗುತ್ತದೆ. ಇದೀಗ ನಿಷೇಧದಿಂದ ಸರಿಸುಮಾರು ಶೇ 40 ರಷ್ಟು ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಜೂನ್ 1 ರಂದು ಸಂಜೆ 4 ರಿಂದ ಜೂನ್ 3 ರ ಸಂಜೆ 4 ರವರೆಗೆ ವಿಧಾನ ಪರಿಷತ್ ಚುನಾವಣೆಯ ಕಾರಣ ಮದ್ಯ ಮಾರಾಟಕ್ಕೆ ನಿಷೇಧ.
ಜೂನ್ 1 ರಂದು ಸಂಜೆ 4 ರ ಒಳಗೆ ಮತ್ತು ಜೂನ್ 3 ರ ಸಂಜೆ 4 ರ ನಂತರ ಮದ್ಯ ಮಾರಾಟಕ್ಕೆ ಅವಕಾಶವಿದೆ.
ಲೋಕಸಭೆ ಚುನಾವಣೆಯ ಮತ ಎಣಿಕೆಯ ಕಾರಣ ಜೂನ್ 3 ರ ಮಧ್ಯರಾತ್ರಿಯಿಂದ ಜೂನ್ 4 ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ನಿಷೇಧ.
ಜೂನ್ 6 ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಎಂಎಲ್‌ಸಿ ಚುನಾವಣೆಯ ಮತ ಎಣಿಕೆಯ ಕಾರಣ ಮದ್ಯ ಮಾರಾಟ ಬಂದ್.