
ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಕಣಕ್ಕಿಳಿದಿದ್ದು,ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆ ಮಾಜಿ ಶಾಸಕ ರಘುಪತಿ ಭಟ್ ರವರನ್ನು ಬಿಜೆಪಿಯಿಂದ ಈಗಾಗಲೇ ಉಚ್ಛಾಟನೆ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ, ತನಗೆ ಈ ಬಗ್ಗೆ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ತಲುಪಿರಲಿಲ್ಲ. ಪ್ರಾಥಮಿಕವಾಗಿ ಮಾಧ್ಯಮಗಳಿಂದಲೇ ವಿಷಯ ತಿಳಿಯಿತು. ನಾನು ಪಕ್ಷದ ಯಾವುದೇ ನಾಯಕರಿಗೂ ಬೈದಿಲ್ಲ .ಪಕ್ಷದಲ್ಲಿ ವ್ಯವಸ್ಥೆ ಸರಿಯಾಗಬೇಕು ಎಂದಷ್ಟೇ ಹೇಳಿದ್ದೇನೆ. ನನ್ನನ್ನು ಪಕ್ಷದಿಂದ ಉಚ್ಚಾಟಿಸಿರಬಹುದು. ನಾನು ಚುನಾವಣೆಯಲ್ಲಿ ಗೆದ್ದರೂ ಸೋತರು ಬಿಜೆಪಿ ಕಾರ್ಯಕರ್ತನಾಗಿಯೇ ಇರುವೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ಹೇಳಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿರುವುದು ನೋವು ತಂದಿದೆ. ಈ ಹಿಂದೆ ಪಕ್ಷಕ್ಕೆ ಮುಜುಗರ ತರುವಂತೆ ಮಾಡಿದ ಅಭ್ಯರ್ಥಿಗಳು ಒಂದೇ ವರ್ಷಕ್ಕೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಹಾಗೂ ಸಂಸದರಾಗಿ ಸ್ಪರ್ಧಿಸಲು ಟಿಕೆಟ್ ಕೂಡ ನೀಡಲಾಗಿದೆ ಎಂದರು.