
ಬಾಗಲಕೋಟೆ: ಬೀಳಗಿ ಶಾಸಕ ಜೆಟಿ ಪಾಟೀಲ್ ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಗ್ಯಾರಂಟಿಯಿಂದ ಅಭಿವೃದ್ಧಿಯಾಗುತ್ತಿಲ್ಲ. ಪ್ರಯೋಜನ ತಗೊಂಡವರು ಓಟು ಹಾಕುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ನಾವು ಎಂಟ್ಹತ್ತು ಜನರು ಈಗಾಗಲೇ ಗ್ಯಾರೆಂಟಿ ಯೋಜನೆಗಳ ಮರುಪರಿಶೀಲನೆ ಬಗ್ಗೆ ಮಾತಾಡಿದ್ದು ಗ್ಯಾರಂಟಿ ಯಾರಿಗೆ ಕೊಡಬೇಕು ಎಷ್ಟು ಕೊಡಬೇಕು ಎಂದು ಪರಾಮರ್ಶಿಸಬೇಕು. ಏಕೆಂದರೆ ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲೂ ಗ್ಯಾರಂಟಿ ಯೋಜನೆಗಳ ಮೇಲೆ ನಾವು ನಂಬಿಕೆ ಇಟ್ಟಿದ್ದೆವು. ಆದರೆ ಪ್ರಯೋಜನ ಪಡೆದವರು ನಮಗೆ ಅನ್ಯಾಯ ಮಾಡಿದರು. ಇದರ ಜೊತೆಗೆ ಜಾತಿ ರಾಜಕಾರಣದಿಂದಲೂ ಬಾಗಲಕೋಟೆಯಲ್ಲಿ ನಾವು ವಿಫಲರಾದೆವು. ಹೀಗಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶಿಸಬೇಕು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚಿಸಲಿದ್ದೇವೆ. ಬಸ್ ಫ್ರೀ ಒಮ್ಮೆಲೇ ತೆಗೆಯಲು ಆಗೊಲ್ಲ. ಯಾರಿಗೆ ಬೇಕು, ಎಷ್ಟು ಫ್ರೀ ಕೊಡಬೇಕು ಎಂದೆಲ್ಲ ಮರುಪರಿಶೀಲನೆ ನಡೆಸಿ ಬಳಿಕ ನಿರ್ಧಾರ ಮಾಡಬೇಕಿದೆ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆಗಳನ್ನ ಹಂತಹಂತವಾಗಿ ತೆಗೆಯುವ ಬಗ್ಗೆ ಸುಳಿವು ನೀಡಿದ್ದಾರೆ