
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಣಂಜಾರು ಲೂರ್ಡ್ಸ್ ಮಾತ ಚರ್ಚಿನ ಧರ್ಮಗುರುಗಳಾಗಿರುವ ರೆ.ಫಾ.ಹೆರಾಲ್ಡ್ ಪಿರೇರಾ ಅವರು ದೀಪ ಬೆಳಗಿ ನೂತನ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಶಿಕ್ಷಣವು ಜಗತ್ತನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಾದ ನೀವೆಲ್ಲರೂ ಉತ್ತಮ ಶಿಕ್ಷಣವನ್ನು ಪಡೆದು ಸಂಸ್ಕಾರವಂತರಾಗಿ ಬಾಳಿ” ಎಂದು ಹೇಳಿದರು. ಇನ್ನೋರ್ವ ಅತಿಥಿ ಮೂಡಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕರಾಗಿರುವ ರಾಜೆಶ್ ಭಟ್ ಅವರು ಮಾತನಾಡಿ “ವಿದ್ಯಾರ್ಥಿಗಳು ನಿರಂತರವಾಗಿ ತಮ್ಮನ್ನು ತಾವು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಜವಾಬ್ದಾರಿಯನ್ನು ತಾವೇ ಅರಿತು ತಮ್ಮ ಭವಿಷ್ಯದ ದಾರಿಯನ್ನು ತಾವೇ ಕಂಡುಕೊಳ್ಳಬೇಕು” ಎಂದು ಹೇಳಿದರು. ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕರಾಗಿರುವ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ ಅವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮಲ್ಲಿ ಸದ್ವಿಚಾರಗಳನ್ನು ಬೆಳೆಸಿಕೊಂಡಾಗ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ನಮ್ಮ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ನಾವೇ, ಅದೇ ರೀತಿ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ಈ ಸಮಾಜದಲ್ಲಿ ಉತ್ತಮ ನಾಯಕರಾಗಿ ಮೂಡಿ ಬರಬೇಕು” ಎಂದು ಹೇಳಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆಯವರು ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು. ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೊ ಅವರು ಪ್ರಸ್ತಾವನೆಗೈದರು. ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಆಡಳಿತಾಧಿಕಾರಿ ವಿನಯ್ ಕುಮಾರ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರುಗಳಾದ ಪ್ರೌಢಶಾಲಾ ವಿಭಾಗದ ಶ್ರೀಮತಿ ಹೇಮಲತಾ, ಪ್ರಾಥಮಿಕ ವಿಭಾಗದ ಪ್ರಕಾಶ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಕೀರ್ತನ್ ಡಿ’ಸೋಜ ಸ್ವಾಗತಿಸಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಫಿಯೋನಾ ರಿಯಾ ಪಿಂಟೊ ವಂದಿಸಿದರು. ವಿದ್ಯಾರ್ಥಿನಿಯರಾದ ಸ್ಲಿಟಾ ಫೆರ್ನಾಂಡಿಸ್ ಹಾಗೂ ಮೇಘವಿ ಕಾರ್ಯಕ್ರಮ ನಿರೂಪಿಸಿದರು.
