
ನವದೆಹಲಿ: ಸರಕಾರಿ ನೌಕರರ ಕೆಲಸದ ಅವಧಿ ಬೆಳಿಗ್ಗೆ 9 ರಿಂದ ಸಂಜೆ 5:30ರ ವರೆಗೆ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಕೆಲ ನೌಕರರು ತಡವಾಗಿ ಕಚೇರಿಗೆ ಬರುವುದು ಕಂಡು ಬರುತ್ತಿದೆ.
ಕೋವಿಡ್ ಬಳಿಕ ಸಾಕಷ್ಟು ನೌಕರರು ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸದೆ, ಸಮಯಕ್ಕಿಂತ ಮೊದಲೇ ಮನೆಗೆ ಹೋಗುವುದು ಕಂಡು ಬರುತ್ತಿದ್ದು , ಇದರಿಂದ ವಿವಿಧ ಕೆಲಸಗಳಿಗಾಗಿ ಬರುವ ಜನಸಾಮಾನ್ಯರಿಗೆ ತೊಂದರೆಯಾಗುವುದನ್ನು ಗಮನದಲ್ಲಿಟ್ಟುಕೊಂಡು ಇದೀಗ ಕೇಂದ್ರ ಸರಕಾರಿ ನೌಕರರಿಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಬೆಳಿಗ್ಗೆ 9:15 ರ ನಂತರ ಬರುವ ನೌಕರರ ಅರ್ಧ ದಿನದ ರಜೆ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.
ಬೆಳಗಿನ ಸಮಯದಲ್ಲಿ ಅನಿವಾರ್ಯವಾಗಿ ತಡವಾಗಿ 15 ನಿಮಿಷಕ್ಕೆ ಮಾತ್ರ ಅವಕಾಶ ನೀಡಲಾಗುವುದು .15 ನಿಮಿಷಕ್ಕಿಂತ ತಡವಾದರೆ ಅದನ್ನು ಅರ್ಧ ದಿನದ ರಜೆಯಾಗಿ ಪರಿಗಣಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಸರಕಾರಿ ನೌಕರರು ತಡವಾಗಿ ಕಚೇರಿಗೆ ಬರುವುದನ್ನು ಮತ್ತು ಬೇಕಾಬಿಟ್ಟಿ ರಜೆ ಹಾಕುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.