
ರಾಯಚೂರು: ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಿಂದಾಗಿ ಸಂಭವಿಸಿದ ಸಾವು ನೋವಿನ ಕುರಿತು ಪ್ರತಿಕ್ರಿಯಿಸಿ ಸಮಸ್ತ ಹಿಂದೂಗಳ ಶ್ರದ್ಧಾ ಉತ್ಸವವಾಗಿದೆ. ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕಾಗಿ ಮೇಳಕ್ಕೆ ಬರುತ್ತಿದ್ದಾರೆ. ಹೆಚ್ಚಿನ ಭಕ್ತರ ಜನಸಂದಣಿ ಆಗಿ ಕಾಲ್ತುಳಿತವಾಗಿ, ಸಾವುಗಳು ಸಂಭವಿಸಿವೆ. ಭಕ್ತರು ಸಹ ಸ್ವಯಂ ಜಾಗೃತರಾಗಿ ನಿಯಮ ಪಾಲನೆ ಜೊತೆಗೆ ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸದ್ಗತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಅಲ್ಲಿನ ಸರ್ಕಾರ ಸೂಕ್ತವಾಗಿ ತನಿಖೆ ನಡೆಸಿ, ಪರಿಹಾರದ ಜೊತೆಗೆ ಜಾಗೃತಿ ವಹಿಸಬೇಕು ಎಂದು ಎಂದು ಹೇಳಿದರು.
ಇನ್ನು ಗಂಗಾ ಸ್ನಾನದಿಂದ ಬಡತನ ದೂರವಾಗಲ್ಲ ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಕುಂಭಮೇಳ ಧಾರ್ಮಿಕ ಶ್ರದ್ಧೆಯ ವಿಚಾರವಾಗಿದ್ದು ರಾಜಕೀಯ ನಾಯಕರು ಇದನ್ನ ಟೀಕಿಸುವ ವಿಚಾರವಾಗಬಾರದು. ಗಂಗಾಸ್ನಾನದಿಂದ ಬಡತನ ನೀಗುತ್ತೆ ಅಂತ ಯಾರು ಹೇಳಿಲ್ಲ. ಗಂಗಾ ಸ್ನಾನ ಎನ್ನುವುದು ಒಂದು ಭಾವನೆಗೆ ಒಳಪಟ್ಟಿದ್ದು ನಮ್ಮ ಪಾಪಗಳು ಪರಿಹಾರವಾಗಿ ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತದೆ. ಗಂಗಾ ಸ್ನಾನ ಮಾಡಿದ್ರೆ ಸಾಲ ಪರಿಹಾರವಾಗುವುದಿಲ್ಲ ಅಂತಾರೆ. ಹಾಗಾದ್ರೆ, ಏನ್ ಮಾಡಿದ್ರೆ ಸಾಲ ಪರಿಹಾರವಾಗುತ್ತೆ? ಸನಾತನ ಹಿಂದೂ ಧರ್ಮವನ್ನು ಟೀಕಿಸುವುದನ್ನೇ ಪ್ರಧಾನವಾಗಿ ಇಟ್ಟಿಕೊಳ್ಳಬಾರದು. ಬೇರೆ ಬೇರೆ ಕಾರ್ಯಕ್ರಮ ಮಾಡುವುದರಿಂದ ಸಾಲ ಪರಿಹಾರವಾಗುತ್ತಾ? ವಿಧರ್ಮಿಯರು ಮಾಡುವ ಕಾರ್ಯಗಳಿಂದ ಸಾಲ ಪರಿಹಾರವಾಗುತ್ತಾ? ಅದನ್ನ ಸಾಬೀತುಪಡಿಸಲಿ. ಇದು ಧಾರ್ಮಿಕ ವಿಚಾರ, ಇದನ್ನ ಟೀಕಿಸುವುದು ಅತ್ಯಂತ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.





















