
ಕಾರ್ಕಳ: ಹೋಮ್ ನರ್ಸ್ ಕೆಲಸಕ್ಕೆಂದು ಬಂದ ಯುವಕನೊಬ್ಬ ಇನ್ನೋರ್ವನ ಜತೆ ಸೇರಿಕೊಂಡು ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಪುರಸಭೆ ವ್ಯಾಪ್ತಿಯ ನಿವಾಸಿ ಶಶಿಧರ ಎಂಬವರು ವಂಚನೆಗೊಳಗಾಗಿದ್ದಾರೆ. ತೆಳ್ಳಾರ್ ನಿವಾಸಿ ರತ್ನಾಕರ ಸುವರ್ಣ ಯಾನೆ ಭೂಮಿಕಾ ರತ್ನಾಕರ(50) ಹಾಗೂ ಕುಕ್ಕುಂದೂರು ಕುಪ್ಪಬೆಟ್ಟು ಮನೆ ನಿವಾಸಿ ಕಾರ್ತಿಕ್ ಶೆಟ್ಟಿ(28) ಬಂಧಿತ ಆರೋಪಿಗಳು.
ಆಗಿದ್ದೇನು ?: ಸುಮಾರು 75ರ ಹರೆಯದ ವಯೊವೃದ್ದ ಶಶಿಧರ್ ಅವರು ಆರ್ಥಿಕ ವ್ಯವಸ್ಥೆಯಲ್ಲೂ ತಕ್ಕಮಟ್ಟಿಗೆ ಸುದೃಢರಾಗಿದ್ದರು. ಆದರೆ ಅವರ ಅಸಹಾಯಕತೆಯನ್ನು ದಾಳವಾಗಿ ಮಾಡಿಕೊಂಡ ಆರೋಪಿಗಳು, ಅವರ ಖಾತೆಯಲ್ಲಿರುವ ಹಣವನ್ನು ಎಗರಿಸುವಲ್ಲಿ ಸಂಚು ರೂಪಿಸಿದ್ದರು. ರತ್ನಾಕರ್ ಸುವರ್ಣ, ಸಹಕರಿಸುವ ಉದ್ದೇಶವನ್ನು ಮುಂದಿಟ್ಟುಕೊಂಡು ಶಶಿಧರ್ ಅವರನ್ನು ಸಂಪರ್ಕಿಸಿದ್ದ. ಅದಕ್ಕಾಗಿ ಅಲೈಟ್‌ಕೇರ್ ಸಂಸ್ಥೆಯಿಂದ ಕಾರ್ತಿಕ್ ಶೆಟ್ಟಿ ಎಂಬಾತನನ್ನು ಹೋಂ ನರ್ಸ್ ಕೆಲಸಕ್ಕಾಗಿ ಅವರ ಮನೆಗೆ ಕಳುಹಿಕೊಟ್ಟಿದ್ದ.
ಹಂತ ಹಂತವಾಗಿ ಹಣ ವರ್ಗಾವಣೆ:ಕಳೆದ ನ.9ರಂದು ಆರೋಪಿ ರತ್ನಾಕರ ಸುವರ್ಣ ತಾನು ಕಳುಹಿಸಿಕೊಟ್ಟ ಹೋಂ-ನರ್ಸ್ ಕಾರ್ತಿಕ್ ಶೆಟ್ಟಿ ಖಾತೆಗೆ ಗೂಗಲ್ ಪೇ ಮೂಲಕ 10 ಸಾವಿರ ರೂ. ಪಾವತಿಸುವಂತೆ ಮನೆ ಮಾಲಿಕ ಶಶಿಧರ ಎಂಬವರನ್ನು ಒತ್ತಾಯಿಸಿದ್ದ. ಶಶಿಧರ್ ಅವರು ನಗದು ನೀಡುತ್ತೇನೆ ಎಂದರೂ ಕೇಳದೆ, ಆನ್‌ಲೈನ್ ಮೂಲಕ ಪಾವತಿಸುವಂತೆ ವಿನಂತಿಸಿಕೊಂಡಿದ್ದ . ಆದರೆ ಮನೆ ಮಾಲಿಕರಿಗೆ ಇವರಿಬ್ಬರು ಸೇರಿಕೊಂಡು ನಡೆಸುತ್ತಿರುವ ವಂಚನೆ ಬಗ್ಗೆ ತಿಳಿಯಲೇ ಇಲ್ಲ.
ಮುಗ್ದರಾಗಿದ್ದ ಅವರು ರತ್ನಾಕರ ಸುವರ್ಣ ಅವರ ವಿನಯತೆಯ ಮಾತುಗಳನ್ನೇ ನಂಬಿ ಗೂಗಲ್ ಪೇ ಮೂಲಕ ಹಣ ಪಾವತಿಸಿಯೇ ಬಿಟ್ಟರು. ದುರಾದೃಷ್ಟ ಏನೆಂದರೆ, ಮೊಬೈಲ್‌ನಲ್ಲಿ ಗೂಗಲ್ ಪೇ ಮಾಡುತ್ತಿರುವ ಸಂದರ್ಭ ಫಿನ್ ನಂಬರನ್ನು ಹೋಂ-ನರ್ಸ್ ಕಾರ್ತಿಕ್ ನೋಡಿ ತಿಳಿದುಕೊಂಡಿದ್ದ. ಅಲ್ಲಿಗೆ ಆತನ ಆಟ ಶುರುವಾಯಿತು. ಕಳೆದ ನ.10ರಿಂದ ನಿರಂತರವಾಗಿ ಡಿ.8ರವರೆಗೆ ಮನೆಯ ಮಾಲಿಕನ ಕಾರ್ಕಳದ ಯೂನಿಯನ್ ಬ್ಯಾಂಕ್ ಶಾಖೆಯ ಖಾತೆಯಿಂದ ಗೂಗಲ್ ಪೇ ಮೂಲಕ ಬರೋಬ್ಬರಿ 9.80 ಲಕ್ಷ ರೂ.ವನ್ನು ಎಗರಿಸಿಕೊಂಡು, ತನ್ನ ಭಾರತ್ ಬ್ಯಾಂಕ್ ಕೋ ಅಪರೇಟಿವ್ ಸೊಸೈಟಿ ಖಾತೆಗೆ ಕಾರ್ತಿಕ್ ಶೆಟ್ಟಿ ವರ್ಗಾವಣೆ ಮಾಡಿಕೊಂಡಿದ್ದಾನೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಸತ್ಯವನ್ನು ತಿಳಿದುಕೊಂಡ ಶಶಿಧರ್ ಅವರು ನ್ಯಾಯಕ್ಕಾಗಿ ಕಾರ್ಕಳ ನಗರ ಠಾಣೆ ಮೆಟ್ಟಿಲೇರಿದ ಪರಿಣಾಮ, ಸತ್ಯಾಂಶ ಬಯಲಾಗಿದೆ. ಆರೋಪಿಗಳಿಬ್ಬರು ಇದೀಗ ಪೊಲೀಸರು ಅತಿಥಿಯಾಗಿದ್ದಾರೆ. ಈಗ ಕಾರ್ಕಳ ನಗರ ಪೊಲೀಸರ ಕಾರ್ಯವೈಖರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.