ಶ್ರೀಮದ್ ರಮಾರಮಣ ವೆಂಕಟರಮಣ ಗೋವಿಂದಾ ಗೋವಿಂದಾ

ಕಾರ್ಕಳ: ಪಡುತಿರುಪತಿ ಒಡೆಯ ಶ್ರೀ ವೆಂಕಟರಮಣ ದೇವರ ರಥೋತ್ಸವದ ಅಂಗವಾಗಿ ವರ್ಣರಂಜಿತ ಓಕುಳಿ ಉತ್ಸವವು ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರಗಿತು. ನಗರದ ರಥಬೀದಿಯಿಂದ ರಾಮಸಮುದ್ರ ಸರೋವರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಮನೆ ಮುಂದಿನ ರಸ್ತೆಯಂಚಿನಲ್ಲಿ ತಾಮ್ರದ ಕಟಾರಗಳಲ್ಲಿ ಸುಗಂಧ ಮಿಶ್ರಿತ, ಮಂಗಳ ದ್ರವ್ಯದಿಂದ ಕೂಡಿದ ಬಣ್ಣದ ನೀರನ್ನು ಭಕ್ತಾದಿಗಳು ಎರಚಿಕೊಳ್ಳುವ ದೃಶ್ಯ ಶೋಭಾಯಮಾನವಾಗಿತ್ತು. `ಶ್ರೀಮದ್ ರಮಾರಮಣ ವೆಂಕಟರಮಣ ಗೋವಿಂದಾ ಗೋವಿಂದಾ ಎಂಬ ಜಯಘೋಷಗಳು ಭಕ್ತಾದಿಗಳಿಂದ ಮೊಳಗುತ್ತಿತ್ತು.ರಾಮಸಮುದ್ರದಲ್ಲಿ ವೆಂಕಟರಮಣ ದೇವರ ಅವಭೃತ ಸ್ನಾನವಿಧಿ ನೆರವೇರುತ್ತಿದ್ದಂತೆ, ಪವಿತ್ರ ತೀರ್ಥದಲ್ಲಿ ಭಕ್ತಜನತೆ ಮುಳುಗೆದ್ದು ತೀರ್ಥಸ್ನಾನ ಮಾಡಿ ಕೃತಾರ್ಥರಾದರು.