
ಉತ್ತರ ಪ್ರದೇಶ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.
ಕಾರಿನಲ್ಲಿದ್ದ ಕುಟುಂಬವು ಗಾಜಿಯಾಬಾದ್‌ನಿಂದ ಗಜ್ರೌಲಾಗೆ ಹೋಗುತ್ತಿದ್ದಾಗ ತಡರಾತ್ರಿ ದೆಹಲಿ-ಲಕ್ನೋ ಹೆದ್ದಾರಿ NH-9 ರ ಗಢ್ ಕೊಟ್ವಾಲಿ ಪ್ರದೇಶದ ಅಲ್ಲಾಬಕ್ಷಪುರ ಕಟ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಕಾರು ಚಾಲಕನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯಲ್ಲಿನ ಡಿವೈಡರ್ ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ಯಾಂಕರ್ ಗೆ ನೇರವಾಗಿ ಡಿಕ್ಕಿ ಹೊಡೆದಿದೆ, ಅಪಘಾತದ ತೀವ್ರತೆ ಎಷ್ಟಿತೆಂದರೆ ಕಾರು ನುಜ್ಜುಗುಜ್ಜಾಗಿದ್ದು ಪ್ರಯಾಣಿಕರು ಕಾರಿನೊಳಗೆ ಸಿಲುಕಿದ್ದು ಅವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಕೆಲ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಅಲ್ಲದೆ ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದ್ದು
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.