
ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿ ಕಳೆದೆರಡು ದಿನಗಳಿಂದ ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ (GPO) ಮಹಿಳೆಯರು ಬೆಳ್ಳಂ ಬೆಳಗ್ಗೆ ಆಗಮಿಸಿ ಅಂಚೆ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ.
ಪ್ರತಿ ತಿಂಗಳು ಖಾತೆಗೆ 8 ಸಾವಿರ ರೂ. ಹಣ ಜಮೆಯಾಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಮಹಿಳೆಯರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದು ಈ ಹಿನ್ನೆಲೆ ಬೆಂಗಳೂರು ಕಚೇರಿಯಲ್ಲೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆದವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಗಳು ಕಳೆದ ವಾರಾಂತ್ಯದಲ್ಲಿ ಹರಿದಾಡುತ್ತಿದ್ದವು.
ಕಳೆದ 15 ದಿನಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಖಾತೆ ಮಾಡಿಸಲು ಅಂಚೆ ಕಚೇರಿ ಅತ್ತ ದೌಡಾಯಿಸುತಿದ್ದು ಬೆಂಗಳೂರು ಅಂಚೆ ಕಚೇರಿ ಸಿಬ್ಬಂದಿ ಸಂಪೂರ್ಣ ಹೈರಾಣಾಗಿದ್ದಾರೆ.