
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕಳ್ಳತನ ಮಾಡಲೆಂದು ಬಂದ ಖದೀಮನೊಬ್ಬ ನಿದ್ರೆಗೆ ಜಾರಿದ್ದು ಪರಿಣಾಮ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಭಾನುವಾರ ಇಲ್ಲಿನ ಇಂದಿರಾ ನಗರ 20 ನಲ್ಲಿರುವ ಡಾ. ಸುನಿಲ್ ಪಾಂಡೆ ಅವರ ಮನೆಗೆ ಬೆಳಗಿನ ಜಾವ ಕಳ್ಳನೊಬ್ಬ ಬೀಗ ಒಡೆದು ಮನೆಯೊಳಗೆ ನುಗ್ಗಿ ಪಾತ್ರೆ ಹಾಗೂ ಇನ್ನಿತರ ವಸ್ತುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡಿದ್ದು ಆದರೆ ವಿಪರೀತ ನಿದ್ದೆಯಿಂದ ಎಸಿ ಆನ್ ಮಾಡಿ ಅಲ್ಲೇ ನಿದ್ರೆ ಹೋಗಿದ್ದಾನೆ.
ಮರುದಿನ ಬೆಳಗ್ಗೆ ಎದ್ದಾಗ ಆತನ ಸುತ್ತಲೂ ಪೊಲೀಸರನ್ನು ಕಂಡು ಬಿಚ್ಚಿಬಿದ್ದಿದ್ದಾನೆ. ಗಾಜಿಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಕಾಸ್ ರೈ ಈ ಕುರಿತು ಮಾತನಾಡಿದ್ದು ಮುಸದ್ದಿಪುರ ನಿವಾಸಿ ಕಪಿಲ್ ಕಶ್ಯಪ್ ಎಂಬಾತ ಅವಕಾಶವನ್ನು ನೋಡಿ ಮನೆ ಬೀಗ ಒಡೆದು ನುಗ್ಗಿ ಬೆಲೆ ಬಾಳುವ ವಸ್ತುಗಳಾದ ಇನ್ವರ್ಟರ್ ಬ್ಯಾಟರಿ, ಗೀಸರ್, ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬಳಿಕ ಎಸಿ ಆನ್ ಮಾಡಿ ಸಿಗರೇಟ್ ಸೇದುತ್ತಾ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಬೆಳಗಿನ ಜಾವ ನೆರೆಹೊರೆಯವರು ಮನೆಯ ಬೀಗ ಮುರಿದಿರುವುದನ್ನು ಗಮನಿಸಿ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದು ಮಾಲೀಕರು ನಮಗೆ ದೂರು ನೀಡಿದ್ದಾರೆ. ಕೂಡಲೇ ನಾವು ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳ ಅಲ್ಲಿಯೇ ಮಲಗಿದ್ದು ಆತನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 379 ಎ ಅಡಿಯಲ್ಲಿ ಕಳ್ಳನ ವಿರುದ್ಧ ಪ್ರಕರಣದ ದಾಖಲಿಸಲಾಗಿದ್ದು ಕಳೆದ ಕೆಲ ತಿಂಗಳ ಹಿಂದಷ್ಟೇ ಆತ ಕಳ್ಳತನ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.