
ಹುಬ್ಬಳ್ಳಿ: ಭಾನುವಾರ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕಕ್ಕೆ ನಾವು ಬೇಕಾದಷ್ಟು ಅಕ್ಕಿ ನೀಡಲು ಸಿದ್ಧರಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಸರ್ಕಾರದ ಬಳಿ ಅಕ್ಕಿ ಖರೀದಿಗೂ ಹಣವಿಲ್ಲದಂಥ ಸ್ಥಿತಿಯಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಕೇಳಿದಾಗ ಅಕ್ಕಿ ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ರಾಜ್ಯ ಸರ್ಕಾರದವರು ಜನರಿಗೆ 5 ಕೆ.ಜಿ. ಅಕ್ಕಿ ಬದಲು 10 ಕೆ.ಜಿ. ನೀಡುವುದಾಗಿ ಹೇಳಿದ್ದಾರೆಯೇ ಹೊರತು ಕೇಂದ್ರ ಸರ್ಕಾರ ಕೊಟ್ಟರೆ ಕೊಡುತ್ತೇವೆಂದು ಎಲ್ಲೂ ಹೇಳಿರಲಿಲ್ಲ. ಕಳೆದ ಬಾರಿ ಅಕ್ಕಿ ಸಂಗ್ರಹ ಕಡಿಮೆ ಇದ್ದ ಕಾರಣ ಎಲ್ಲ ರಾಜ್ಯಗಳಿಗೂ ಅಕ್ಕಿ ವಿತರಣೆ ಸ್ಥಗಿತಗೊಳಿಸಿದ್ದೆವು. ಇದೀಗ ಮತ್ತೆ ಆರಂಭಿಸಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಅಕ್ಕಿ ಕೊಂಡುಕೊಳ್ಳುವುದಿಲ್ಲ ಎಂದರು. ಸಿದ್ದರಾಮಯ್ಯ ಅವರು ಅಕ್ಕಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಇಂಥ ರಾಜಕಾರಣವನ್ನು ಅವರು ಮೊದಲು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಕಾಂಗ್ರೆಸ್ ಶಾಸಕರು ನನ್ನ ಬಳಿ ಬಂದು ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸ್ವಲ್ಪ ಹಣ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯನ್ನು ಕಾಂಗ್ರೆಸ್‌ನವರೇ ತಂದುಕೊಂಡು ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.