
ಕರ್ನಾಟಕದ ಅಯೋಧ್ಯೆಂದೇ ಖ್ಯಾತಿಯಾಗಿರುವ ಧಾರ್ಮಿಕ ಭಾವೈಕ್ಯತಾ ಕೇಂದ್ರ ದತ್ತಪೀಠದಲ್ಲಿ ಡಿಸೆಂಬರ್ 12-13-14ರಂದು ದತ್ತಜಯಂತಿ ಸಂಭ್ರಮ ನಡೆಯುತ್ತಿದ್ದು ಈ ಹಿನ್ನೆಲೆ ಕಾಫಿನಾಡು ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಿರಲಿದೆ. ಹೀಗಾಗಿ ಡಿಸೆಂಬರ್ 12 ರಿಂದ 14 ರವರೆಗೆ ಕಾಫಿನಾಡಲ್ಲಿ 4000 ಪೊಲೀಸರ ಹದ್ದಿನ ಕಣ್ಣಿನಲ್ಲಿ ದತ್ತಜಯಂತಿ ನಡೆಯುಲಿದ್ದು ಡಿಸೆಂಬರ್ 12ರಂದು ಸಾವಿರಾರು ಮಹಿಳೆಯರಿಂದ ಅನುಸೂಯ ಜಯಂತಿ ನಡೆಯಲಿದೆ.
ಡಿಸೆಂಬರ್ 13ರಂದು 20ಸಾವಿರಕ್ಕೂ ಅಧಿಕ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು 14ರಂದು ರಾಜ್ಯದ ನಾನಾ ಭಾಗಗಳಿಂದ ಬರುವ 25 ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಜಿಲ್ಲಾದ್ಯಂತ 4000ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದು ಜಿಲ್ಲಾಡಳಿತ ಹಿಂದೂ-ಮುಸ್ಲಿಂ ಮುಖಂಡರ ಜೊತೆ ಸಭೆ ಕೂಡ ನಡೆಸಿದೆ. ಯಾರಾದರೂ ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದರೆ ಅಂತವರ ವಿರುದ್ಧ ಕಠಿಣ-ನಿರ್ದಾಕ್ಷಣ್ಯ ಕ್ರಮಕೈಗೊಳ್ಳೋದಾಗಿ ಡಿಸಿ-ಎಸ್ಪಿ ಎಚ್ಚರಿಸಿದ್ದಾರೆ.
ದತ್ತಜಯಂತಿಯ ಹಿಂದೆ-ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಓರ್ವ ಎಸ್ಪಿ. 7 ಜನ ಎಸ್ಪಿ ಗ್ರೇಡ್ ಅಧಿಕಾರಿಗಳು. 28 ಡಿವೈಎಸ್ಪಿ, 65 ಇನ್ಸ್ ಪೆಕ್ಟರ್, 300 ಸಬ್ ಇನ್ಸ್ಪೆಕ್ಟರ್. 250 ಎಎಸ್ಐ. 20 ಕೆ.ಎಸ್.ಆರ್.ಪಿ. 28 ಡಿಎಆರ್. 2 ಟೀಂ ಆರ್.ಎ.ಎಫ್. 500 ಹೋಂ ಗಾರ್ಡ್. 400 ಸಿ.ಸಿ. ಟಿವಿ, 10 ಡ್ರೋನ್ ಕ್ಯಾಮರಾ ಜೊತೆ 29 ಚೆಕ್ ಪೊಸ್ಟ್ ಹಾಕಲಾಗಿದ್ದು 4000 ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ದತ್ತಜಯಂತಿ ನಡೆಯಲಿದೆ.
ಡಿಸೆಂಬರ್ 14ರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಾರೀ ಮಳೆಯಿಂದ ದತ್ತಪೀಠ ಮಾರ್ಗದ ರಸ್ತೆ ಕುಸಿದಿರೋದ್ರಿಂದ ಲಾಂಗ್ ಚಾರ್ಸಿ ಗಾಡಿಗಳಿಗೆ ಈ ವರ್ಷ ಕಡ್ಡಾಯವಾಗಿ ನಿಷೇಧ ಹೇರಲಾಗಿದೆ



















