
ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ, ದೇಶದ ದಕ್ಷಿಣದ ಅಂಚಿನಲ್ಲಿರುವ ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಧ್ಯಾನದ ಮೊರೆ ಹೋಗಲಿದ್ದಾರೆ.
ಸುಮಾರು 45 ತಾಸು ಕಾಲ ಸ್ಮಾರಕದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗಿದ್ದು, ಅವರ ಧ್ಯಾನಕ್ಕೆ ಹಾಗೂ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೆ, 2000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕನ್ಯಕುಮಾರಿಗೆ ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಕನ್ಯಾಕುಮಾರಿಯ ರಾಕ್ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮೋದಿ ಇರುವ ವೇಳೆ ವಿವೇಕಾನಂದ ಶಿಲಾ ಸ್ಮಾರಕದ ಸುತ್ತಮುತ್ತ ಖಾಸಗಿ ಬೋಟ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೆ ಪ್ರವಾಸಿಗರ ಭೇಟಿಗೂ ನಿಷೇಧ ಇರಲಿದೆ.
2019ರ ಚುನಾವಣಾ ಪ್ರಚಾರದ ನಂತರ ಕೇದಾರನಾಥ ಗುಹೆಯಲ್ಲಿ ಇದೇ ರೀತಿ ಮೋದಿ ಧ್ಯಾನ ಮಾಡಿದ್ದರು.
ಈ ನಡುವೆ ಮೋದಿ ಧ್ಯಾನಕ್ಕೆ ಅವಕಾಶ ನೀಡದಂತೆ ಕನ್ಯಾಕುಮಾರಿ ಜಿಲ್ಲಾಧಿಕಾರಿಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮನವಿ ಮಾಡಿದೆ. ಇದು ದೇಶಿ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಸಮಯ. ಹೀಗಾಗಿ ಮೋದಿ ಧ್ಯಾನಕ್ಕೆ ಅವಕಾಶ ನೀಡದಂತೆ ಅದು ಮನವಿ ಮಾಡಿದೆ.