
ಮಂಗಳೂರು: ಮಂಗಳೂರಿನ ಶಕ್ತಿನಗರದ ಪದವು ಕಾನಡ್ಕ ದೂಜ ಎಂಬ ಕೋಣವು ಕೇವಲ ಎಂಟು ವರ್ಷಗಳಲ್ಲಿ ಕಂಬಳದಲ್ಲಿ ಆರು ಬಾರಿ ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾಗಿದ್ದು ನಿರೀಕ್ಷೆಗೂ ಮೀರಿದ ಓಟದ ಸಾಧಕ ದೂಜಾ ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಕಂಬಳ ಓಟದಲ್ಲಿ ಭಾಗವಹಿಸಿಲ್ಲ. “ಪದವು ಕಾನಡ್ಕ ಫ್ರಾನ್ಸಿಸ್ ಪ್ಲೇವಿ ಡಿ’ಸೋಜೆರ್ ಎರ್ಲು ” ಎಂಬ ಕೂಗು ಕೇಳುವಾಗ ಕಂಬಳ ಅಭಿಮಾನಿಗಳ ಕಿವಿ ನೆಟ್ಟಾಗುತ್ತಿದ್ದು ಇದೀಗ ಒಂದೆರಡು ವರ್ಷದಿಂದ ಅಭಿಮಾನಿಗಳು ನಿರಾಸೆಯಿಂದಿದ್ದಾರೆ. ಪ್ರಸ್ತುತ ದೂಜ ಆರೋಗ್ಯವಾಗಿದ್ದರೂ ಕಂಬಳ ಕೆರೆಯ ಓಟಕ್ಕೆ ಮುಕ್ತಾಯ ಹಾಡಿದ್ದಾನೆ..
ಈ ಕುರಿತು ಮಾಹಿತಿ ನೀಡಿದ ದೂಜ ನ ಮಾಲಕರಾದ ಡೋಲ್ಫಿ ಡಿ’ಸೋಜಾ ಅವರು “ಕಳೆದೊಂದು ವರ್ಷದ ಹಿಂದೆ ಇದ್ದಕ್ಕಿದ್ದ ಹಾಗೆ ದೂಜಾ ಅನಾರೋಗ್ಯಕ್ಕೆ ತುತ್ತಾಗಿದ್ದು ಕಾರಣ ತಿಳಿದಿರಲಿಲ್ಲ. ಹುಚ್ಚುನಾಯಿ ಕಚ್ಚಿರಬಹುದು ಎಂದು ಅಂದಾಜಿಸಿದ್ದು ಆದರೆ ಬಳಿಕ ದೂಜ ತಿಂದ ಆಹಾರದಲ್ಲಿ ವಿಷ ಸೇರಿತ್ತು ಎಂಬ ವಿಚಾರ ಬೆಳಗೆ ಬಂದಿತು. ಕಂಬಳದಲ್ಲಿ ನಿರಂತರವಾಗಿ ಮೆಡಲ್ ಪಡೆಯುತ್ತಿದ್ದ ದೂಜನಿಗೆ ಯಾರೋ ಆಹಾರದ ಮೂಲಕ ವಿಷ ಉಣಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡರೂ ಕಂಬಳ ಕೆರೆಯಲ್ಲಿ ಓಡುವ ಶಕ್ತಿ ದೂಜ ಹೊಂದಿಲ್ಲ” ಎಂದು ತಿಳಿಸಿದ್ದಾರೆ.




















