
ಮಂಗಳೂರು: ನಿಗದಿತ ಸಮಯಕ್ಕೆ ಕಂಬಳ ಮುಕ್ತಾಯವಾಗುವುದಿಲ್ಲ ಹಾಗೂ ಓಟಗಾರರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಜಿಲ್ಲಾ ಕಂಬಳ ಸಮಿತಿಯು ಕಂಬಳ ಓಟಗಾರನಿಗೆ ಹೊಸ ನಿಯಮ ಜಾರಿಗೆ ತಂದಿದ್ದು ಅದೇನೆಂದರೆ ಈ ಹಿಂದೆ ಒಂದು ಕೂಟದಲ್ಲಿ 5-6 ಜತೆ ಕೋಣ ಓಡಿಸಿದ ಕಂಬಳದ ಓಟಗಾರರು ಇನ್ನು ಮುಂದೆ ಗರಿಷ್ಠ 3 ಜತೆ ಕೋಣಗಳನ್ನು ಮಾತ್ರ ಓಡಿಸಬಹುದು.
ಜತೆಗೆ ಕರೆಯ “ಗಂತ್’ನಲ್ಲಿ ಕೋಣ ಬಿಡುವಲ್ಲೂ ಒಬ್ಬರಿಗೆ 3 ಜತೆ ಕೋಣ ಬಿಡಲು ಮಾತ್ರ ಅವಕಾಶ ಒದಗಿಸಲಾಗಿದೆ.ಆಗಸ್ಟ್‌ನಲ್ಲಿ ನಡೆಯುವ ಕಂಬಳ ಸಮಿತಿಯ ಮಹಾಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆದು ಈ ನಿಯಮ ಮುಂದಿನ ಕಂಬಳದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ.
ಒಂದು ಕೂಟದಲ್ಲಿ ಹಲವು ಜತೆ ಕೋಣಗಳನ್ನು ಒಬ್ಬನೇ ಓಡಿಸುವ ಪ್ರಮೇಯವಿದೆ. ಒಮ್ಮೆ ಕರೆಯಲ್ಲಿ ಓಡಿ ತತ್‌ಕ್ಷಣವೇ ಮತ್ತೆ ಆತ ಓಟಕ್ಕೆ ಸಿದ್ಧವಾಗಲು ಸಾಧ್ಯವಾಗುತ್ತಿಲ್ಲ ಹಾಗೂ ಪದಕ ಗೆಲ್ಲುವ ಕೋಣಗಳನ್ನು ಸೀಮಿತ ಓಟಗಾರರೇ ಓಡಿಸುತ್ತಿದ್ದರೆ ಹೊಸ ಓಟಗಾರರಿಗೆ ಅವಕಾಶ ಸಿಗುವುದಿಲ್ಲ. ಜತೆಗೆ “ಗಂತ್’ನಲ್ಲಿ ಕೋಣ ಬಿಡುವಲ್ಲಿಯೂ ಹೆಚ್ಚು ಜನರಿರುತ್ತಾರೆ ಹಾಗೂ ಕೆಲವೇ ಮಂದಿ ಹಲವು ಕೋಣಗಳನ್ನು ಬಿಡುತ್ತಾರೆ. ಇಲ್ಲೂ ಹೊಸಬರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲವಾದ್ದರಿಂದ ಈ ಹೊಸ ಬದಲಾವಣೆ ಮಾಡಲಾಗಿದೆ.