ಮುದ್ರಾಡಿ ಕುಣಿತ ಭಜನಾ ಕಮ್ಮಟ ತರಬೇತಿಯ ಸಮಾರೋಪ ಸಮಾರಂಭ

ಹೆಬ್ರಿ :ಧ್ಯಾನ, ಯಜ್ಞ, ಅರ್ಚನೆಗೆ ಸಮನಾದ ಫಲ ಕಲಿಯುಗದಲ್ಲಿ ಹರಿಸಂಕೀರ್ತನೆಗೆ ಇದೆ. ತಾಳ, ಲಯಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಭಕ್ತಿ ಭಾವದಿಂದ ದೇವರನ್ನು ನೆನೆದಾಗ ಮಾನಸಿಕವಾಗಿ ಶಾಂತಿ, ನೆಮ್ಮದಿ ದೊರಕುತ್ತದೆ. ಭಜನೆಯನ್ನು ಹಾಡಿದರೆ ಸುತ್ತಮುತ್ತಲ ಪ್ರದೇಶದಲ್ಲಿರುವ ದುಷ್ಟಶಕ್ತಿಗಳು ದೂರಹೋಗುತ್ತದೆ. ಮನೆಮನಗಳ ವಾತಾವರಣವು ಸ್ವಚ್ಛವಾಗಿರುತ್ತದೆ. ರೋಗರುಜಿನಗಳು, ಸಂಸಾರತಾಪತ್ರಯಗಳು ಕಡಿಮೆಯಾಗಿ ಹಾಗೂ ಒತ್ತಡವು ದೂರವಾಗಿ ಸುಂದರವಾದ ಬದುಕು ನಮ್ಮದಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಲ್ಪ ಹೊತ್ತು ಭಜನೆಗಾಗಿ ಸಮಯವನ್ನು ಮೀಸಲಿಟ್ಟು ನೆಮ್ಮದಿಯ ಬದುಕನ್ನು ನಿಮ್ಮದಾಗಿಸಿಕೊಳ್ಳಿ ಎಂದು ಮುದ್ರಾಡಿ ಪ್ರೌಢಶಾಲೆಯ ಅಧ್ಯಾಪಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ಮುದ್ರಾಡಿ ಸಮುದಾಯ ಭವನದಲ್ಲಿ ಒಂದು ತಿಂಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ನಡೆದ ಕುಣಿತ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಧಾರ್ಮಿಕ ನೆಲೆವೀಡಾದ ಮುದ್ರಾಡಿಯಲ್ಲಿ ಹಲವಾರು ಭಜನಾ ತಂಡಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ಶುಭ ಸಮಾರಂಭಗಳಲ್ಲಿ ಭಜನೆಯನ್ನು ನಡೆಸುವ ಮೂಲಕ ನಾವೆಲ್ಲರೂ ನಮ್ಮ ಪರಂಪರೆ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳೋಣ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂತಹ ತರಬೇತಿಗಳು ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ. ತಿಂಗಳಲ್ಲಿ ಒಂದು ದಿನವಾದರೂ ಎಲ್ಲರೂ ಒಟ್ಟು ಸೇರಿ ಭಜನೆಯಲ್ಲಿ ಪಾಲ್ಗೊಂಡು ನೆಮ್ಮದಿ ವಾತಾವರಣ ಕಂಡುಕೊಳ್ಳೋಣ ಎಂದರು.ಉಡುಪಿ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ರಾಘವೇಂದ್ರ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುದ್ರಾಡಿ ವಲಯ ಭಜನಾ ಪರಿಷತ್ ಅಧ್ಯಕ್ಷ ವರಂಗ ಸುರೇಶ್ ಪೂಜಾರಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗಣಪತಿ ಎಂ., ಮುದ್ರಾಡಿ ವಲಯಾಧ್ಯಕ್ಷರಾದ ರತ್ನಾಕರ ಪೂಜಾರಿ ಮಾತಿಬೆಟ್ಟು, ಭಜನಾ ತರಬೇತುದಾರರಾದ ಚಾರ ಪೂರ್ಣಿಮಾ, ಬಲ್ಲಾಡಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಹರೀಶ್ ಕುಲಾಲ್, ರಾಮ ಭಜನಾ ಮಂಡಳಿ ಅಧ್ಯಕ್ಷರಾದ ಶುಭಧರ ಶೆಟ್ಟಿ, ಸೇವಾಪ್ರತಿನಿಧಿಗಳಾದ ವನಿತಾ, ಸಂಧ್ಯಾ, ವಾಣಿ, ಹೇಮಾ ಉಪಸ್ಥಿತರಿದ್ದರು.ಶಿಬಿರಾರ್ಥಿಗಳಾದ ಕೌಶಿಕ್ ಮತ್ತು ಆರಾಧ್ಯ, ಪೋಷಕರಾದ ಪ್ರಮೀಳಾ ಮತ್ತು ಶ್ಯಾಮಲಾ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತರಬೇತಿ ನೀಡಿದ ಪೂರ್ಣಿಮಾ ಅವರನ್ನು ಅಭಿನಂದಿಸಲಾಯಿತು. ಸೇವಾಪ್ರತಿನಿಧಿ ಮಮತಾ ಸ್ವಾಗತಿಸಿದರು. ಮುದ್ರಾಡಿ ವಲಯ ಮೇಲ್ವಿಚಾರಕರಾದ ಸುಮಲತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.