
ಬೆಂಗಳೂರು:ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಬಂಧನದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಹಾಜರುಪಡಿಸಿದ್ದು ಈ ವೇಳೆ ‘ನನಗೆ ಕೊಟ್ಟಿರುವ ರೂಮ್‌ನಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಶೌಚಾಲಯ ಸ್ವಚ್ಛವಾಗಿಲ್ಲ. ಹಿಂಸೆ ಆಗುತ್ತಿದೆ’ ಎಂದು ನ್ಯಾಯಾಲಯದ ಮುಂದೆ ಅಲವತ್ತುಕೊಂಡರು.
ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗೆ ಹಿಂಸೆ ನೀಡದಂತೆ ಎಸ್‌ಐಟಿ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ದಿನ ನನ್ನನ್ನು ಮಾಧ್ಯಮಗಳು ಕ್ರಿಮಿನಲ್ ರೀತಿ ಬಿಂಬಿಸುತ್ತಿವೆ. ಹೀಗಾಗಿ ಮೀಡಿಯಾ ಟ್ರಯಲ್ ನಿರ್ಬಂಧಿಸುವಂತೆ ಪ್ರಜ್ವಲ್ ಮನವಿ ಮಾಡಿದ್ದು ಈ ಕೋರಿಕೆಗೆ ಸ್ಪಂದಿಸಿದ ನ್ಯಾಯಾಲಯವು, ಈ ಬಗ್ಗೆ ನಿಮ್ಮ ವಕೀಲರು ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಸೂಚಿಸಿತು.ಇನ್ನು ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶವನ್ನು ವೀಕ್ಷಿಸಲು ತಮಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪ್ರಜ್ವಲ್ ಕೋರಿದ್ದು ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.