“ಸಂಸ್ಕಾರಯುತ ಶಿಕ್ಷಣವೇ ಉತ್ತಮ ಆದರ್ಶ ಜೀವನಕ್ಕೆ ಬುನಾದಿ “ಬಲ್ಲಾಡಿ ಚಂದ್ರಶೇಖರ ಭಟ್

ಹೆಬ್ರಿ :ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನಾಡು ನಮ್ಮದು. ನಮ್ಮ ದೇಶದ ಉತ್ಕೃಷ್ಟ ಸಂಸ್ಕೃತಿಗೆ ವಿಶ್ವದೆಲ್ಲೆಡೆ ಗೌರವವಿದೆ. ಪ್ರಾಚೀನ ಕಾಲದ ಋಷಿಮುನಿಗಳು, ಆದರ್ಶ ಮಹಾಪುರುಷರು, ದಾರ್ಶನಿಕರು, ಸಾಮಾಜಿಕ ಸುಧಾರಕರು ನಮ್ಮ ಸಂಸ್ಕೃತಿಯ ಔನ್ನತ್ಯಕ್ಕೆ ಕಾರಣೀಕರ್ತರಾಗಿದ್ದಾರೆ. ಅವರ ಆದರ್ಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಿದೆ. ಆದರೆ ಆಧುನಿಕ ಜೀವನ ಶೈಲಿಗೆ ಒಳಗಾದ ನಾವುಗಳು ಹಿರಿಯರು ಬಳುವಳಿಯಾಗಿ ನೀಡಿದ ಅನೇಕ ಸಂಪ್ರದಾಯಗಳನ್ನು, ಆಚಾರ ವಿಚಾರಗಳನ್ನು ಪಾಲಿಸದೇ ಇರುವುದು ಖೇದಕರ ಸಂಗತಿಯಾಗಿದೆ. ನಮ್ಮ ದೇಶದ ವಿಭಿನ್ನ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು.ಬಾಲ್ಯದಲ್ಯೇ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆತ್ತವರು ಕಾಳಜಿ ವಹಿಸಿಕೊಳ್ಳಬೇಕು. ಕೇವಲ ಕ್ಷಣಿಕ ಸುಖಕ್ಕಾಗಿ ಜೀವನ ಮೌಲ್ಯಗಳಿಂದ ದೂರವಾದರೆ ಮಕ್ಕಳು ಅಡ್ಡ ದಾರಿ ಹಿಡಿದು ಜೀವನದಲ್ಲಿ ಅಗೌರವಕ್ಕೆ ಒಳಗಾಗುತ್ತಾರೆ. ಮಕ್ಕಳ ಶ್ರೇಯಸ್ಸನ್ನು ಬಯಸುವ ಹೆತ್ತವರು ಮಕ್ಕಳಲ್ಲಿ ದೇಶದ ಬಗ್ಗೆ, ದೇವರ ಬಗ್ಗೆ, ಗುರುಹಿರಿಯರ ಬಗ್ಗೆ, ಬಂಧುಬಾಂಧವರ ಬಗ್ಗೆ, ಧರ್ಮ ಸಂಸ್ಕೃತಿಯ ಬಗ್ಗೆ ಮತ್ತು ಆಹಾರ ವಿಹಾರದ ಬಗ್ಗೆ ತಿಳುವಳಿಕೆ ಮೂಡಿಸುವ, ಗೌರವ ನೀಡುವ ಆದರ್ಶದ ಪಾಠಗಳನ್ನು ಹೇಳಿಕೊಡಬೇಕು. ಸಂಸ್ಕಾರಯುತ ಶಿಕ್ಷಣವನ್ನು ಪಡೆದ ವ್ಯಕ್ತಿ ಜೀವನದಲ್ಲಿ ಕಷ್ಟ, ಸುಖಗಳನ್ನು, ನೋವು, ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವನ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾನೆ. ಸುಂದರವಾದ ಹೂವಿಗೆ ಉತ್ತಮ ಸುವಾಸನೆಯಿದ್ದರೆ ಅದರ ಮೌಲ್ಯ ಹೇಗೆ ಹೆಚ್ಚುವುದೋ ಹಾಗೆಯೇ ಸಂಸ್ಕಾರದಿಂದ ಕೂಡಿದ ಶಿಕ್ಷಣದಿಂದ ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಹಾಗಾಗಿ ನಾವೆಲ್ಲರೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಮುಂದಾಗಬೇಕು ಎಂದು ಸಂಪನ್ಮೂಲ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ಎಳ್ಳಾರೆ ಸಮುದಾಯ ಭವನದಲ್ಲಿ ಅಭಿವೃದ್ಧಿ ಜ್ಞಾನವಿಕಾಸ ಕೇಂದ್ರದ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ” ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಪಾತ್ರ “ವಿಷಯದ ಕುರಿತು ಮಾತನಾಡಿದರು. ಒಕ್ಕೂಟದ ಅಧ್ಯಕ್ಷರಾದ ಸತೀಶ್ ನಾಯ್ಕ್, ಉಪಾಧ್ಯಕ್ಷರಾದ ರಾಜೇಶ್ ನಾಯ್ಕ್, ಕೇಂದ್ರದ ಸಂಯೋಜಕಿ ಸುನಂದಾ, ಸೇವಾಪ್ರತಿನಿಧಿ ಹೇಮಾ ಉಪಸ್ಥಿತರಿದ್ದರು. ಕೇಂದ್ರದ ಹಿರಿಯ ಸದಸ್ಯೆ ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಬೇಬಿ ಭಕ್ತಿಗೀತೆ ಹಾಡಿದರು. ಕುಮಾರಿ ಸುಶ್ಮಿತಾ ವರದಿ ಮಂಡಿಸಿದರು. ಸುಜಾತ ಸ್ವಾಗತಿಸಿ, ಉಷಾ ಶೆಟ್ಟಿ ವಂದಿಸಿದರು. ವನಿತಾ ಕಾರ್ಯಕ್ರಮ ನಿರೂಪಿಸಿದರು