
ಬೆಂಗಳೂರು: ಎಚ್ಎಸ್ಆರ್‌ಪಿ ಅಳವಡಿಕೆಗೆ ವಿಧಿಸಲಾಗಿರುವ ಗಡುವು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಿಎನ್‌ಡಿ ಎನರ್ಜಿ ಲಿಮಿಟೆಡ್ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠವು ರಾಜ್ಯದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ಎಸ್ಆರ್‌ಪಿ) ಅಳವಡಿಕೆ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮ ಹಾಗೂ ನಿರ್ಧಾರವನ್ನು ಜುಲೈ 4ವರಗೆ ಕ್ರಮ ಜರುಗಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿದ್ದು ಜೊತೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗದಿಪಡಿಸಿರುವ ಗಡುವು ವಿಸ್ತರಿಸಲು ಅನುಮತಿ ಸಹ ನೀಡಿದೆ.
ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸರ್ಕಾರ ಮೇ 31ರ ಗಡುವು ವಿಧಿಸಿತ್ತು. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆ ವಿಚಾರದಲ್ಲಿ ಜೂ.12ರವರೆಗೆ ಬಲವಂತದ ಕ್ರಮ ಅಥವಾ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮೇ 21ರಂದು ಹೈಕೋರ್ಟ್ ರಜಾಕಾಲದ ಪೀಠ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ, ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆಗಸ್ಟ್ ಅಥವಾ ಸೆಪ್ಟೆಂಬರ್‌ವರೆಗೆ ಗಡುವು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಬೇಕು. ನ್ಯಾಯಪೀಠ ಅನುಮತಿಸಿದರೆ ಒಂದು ವಾರದಲ್ಲಿ ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಹೀಗಾಗಿ ಹೈಕೋರ್ಟ್ ರಜಾಕಾಲೀನ ಪೀಠ ಮೇ 21ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಜುಲೈ 4ವರೆಗೆ ವಿಸ್ತರಿಸಿ ಆದೇಶಿಸಿದ್ದು ಜೊತೆಗೆ, ರಾಜ್ಯ ಸರ್ಕಾರವು ಆಗಸ್ಟ್-ಸೆಪ್ಟೆಂಬರ್‌ವರೆಗೆ ಎಚ್ಎಸ್ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಿಸಲಾಗುವುದು ಎಂದು ತಿಳಿಸಿದೆ.