
ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ-ಶಾಲಾ ಶಿಕ್ಷಣ ಇಲಾಖೆ ಮೂಡುಬಿದಿರೆ ತಾಲ್ಲೂಕು, ದ.ಕ ಮತ್ತು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ಮೂಡಬಿದಿರೆ ತಾಲೂಕು ಮಟ್ಟದ- ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ಸಿಸ್ ಪಂದ್ಯಾಟ ನಡೆಯಿತು. ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದ ಎಕ್ಸಲೆಂಟ್ ಕಾಲೇಜಿನ ಪ್ರಾಧ್ಯಾಪಕರಾದ ನರಸಿಂಹರಾವ್ ಆಟ ಜೀವನಕ್ಕೆ ಸೋಲು ಗೆಲುವಿನ ಪಾಠವನ್ನು ತಿಳಿಸಿಕೊಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ದೀರ್ಘಾಯುಷ್ಯದ ಬದುಕಿಗೆ ಕ್ರೀಡೆಯು ಸಹಕಾರಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ಸ್ನೇಹ ಸಹಕಾರದ ಬೆಸುಗೆಯನ್ನು ಗಟ್ಟಿಗೊಳಿಸುತ್ತದೆ. ಇಂತಹ ಕ್ರೀಡೆಯಲ್ಲಿ ಪಾಲ್ಗೊಂಡು ಮುಂದಿನ ದಿನಗಳಲ್ಲಿ ದೇಶದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಏರಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಮೂಡುಬಿದಿರೆ ತಾಲೂಕಿನ ದೈಹಿಕ ಶಿಕ್ಷಣ ಸಂಯೋಜಕರಾದ ನವೀನ್ ಎಂ ಹೆಗ್ಡೆ ಮಾತನಾಡಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಶಿಕ್ಷಣಕ್ಷೇತ್ರಕ್ಕೆ ಒತ್ತು ನೀಡುವುದರ ಜೊತೆಗೆ ಕ್ರೀಡಾ ವಲಯದಲ್ಲಿಯೂ ಹಲವು ಪಂದ್ಯಾಟಗಳಿಗೆ ಆಶ್ರಯವನ್ನು ನೀಡುತ್ತಾ ಸಂಘಟಕರಿಗೆ, ಕ್ರೀಡಾಳುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡುತ್ತಿದೆ. ಮಾದರಿ ಸಂಸ್ಥೆಯಾಗಿ ಸಮಾಜದ ಆಸ್ತಿಯಾಗಿದೆ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮಾತನಾಡಿ ಒತ್ತಡದ ಬದುಕಿಗೆ ಕ್ರೀಡೆ ನವೋಲ್ಲಾಸವನ್ನು ನೀಡುತ್ತದೆ, ಶಿಸ್ತಿನ ಮನೋಭಾವವನ್ನು ರೂಢಿಸುತ್ತ ಸಾಂಘಿಕ ಶಕ್ತಿಯನ್ನು ಬೆಳೆಸುತ್ತದೆ. ಶರೀರದ ಸ್ವಾಸ್ತದ ಜೊತೆಗೆ ಸಮಾಜದ ಸ್ವಾಸ್ತವನ್ನು ಹೆಚ್ಚಿಸುವ ಕ್ರೀಡೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಉತ್ತೇಜನ ನೀಡುತ್ತದೆ ಎಂದು ನುಡಿದರು. ತಾಲೂಕಿನ ಬೇರೆ ಬೇರೆ ಕಾಲೇಜಿನಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪಂದ್ಯಾಟದಲ್ಲಿ ಪದವಿಪೂರ್ವ ಬಾಲಕ ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನವನ್ನು ಹಾಗೂ ಶೆಟಲ್ ಬ್ಯಾಡ್ಮಿಟನ್ ಪಂದ್ಯದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಜಿಲ್ಲಾ ಮಟಕ್ಕೆ ಪ್ರವೇಶ ಪಡೆದರು
ಈ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಹಾಗೂ ಎಕ್ಸಲೆಂಟ್ ಕ್ರೀಡಾ ತರಬೇತುದಾರರಾದ- ಯಸ್.ಯಸ್ ಪಾಟೀಲ್‌ರವರು ಹಾಗೂ ಮಹೇಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.













